ನಟಿ ಅಂಬಿಕಾ ವಿರುದ್ಧ ₹46 ಕೋಟಿ ಚೆಕ್ ವಂಚನೆ ಆರೋಪ; ಸಹೋದರಿ ರಾಧಾ ದೂರು

ಚೆನ್ನೈ: ಕನ್ನಡ, ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಜನಪ್ರಿಯತೆ ಗಳಿಸಿರುವ ಹಿರಿಯ ನಟಿ ಅಂಬಿಕಾ ವಿರುದ್ಧ ₹46 ಕೋಟಿ ಮೌಲ್ಯದ ಚೆಕ್ ವಂಚನೆ ಆರೋಪ ಕೇಳಿಬಂದಿದೆ. ಅವರ ಸಹೋದರಿ ಹಾಗೂ ಹಿರಿಯ ನಟಿ ರಾಧಾ ಅವರು ಈ ಸಂಬಂಧ ಗ್ರೇಟರ್ ಚೆನ್ನೈ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಸೆಪ್ಟೆಂಬರ್ 21ರಂದು ಸಲ್ಲಿಸಿರುವ ದೂರಿನಲ್ಲಿ, ಚೆನ್ನೈನ ತಮ್ಮ ನಿವಾಸದಲ್ಲಿದ್ದ ಸಹಿ ಮಾಡಿದ ಖಾಲಿ ಚೆಕ್‌ಗಳನ್ನು ತಮ್ಮ ಗಮನಕ್ಕೆ ಬಾರದೆ ತೆಗೆದುಕೊಂಡು, ಅಂಬಿಕಾ ಅವರ ಹೆಸರಿನಲ್ಲಿ ಸುಮಾರು ₹46 ಕೋಟಿ ಪಡೆಯಲು ಪ್ರಯತ್ನಿಸಲಾಗಿದೆ ಎಂದು ರಾಧಾ ಆರೋಪಿಸಿದ್ದಾರೆ.
ರಾಧಾ ಅವರ ದೂರಿನ ಪ್ರಕಾರ, ವ್ಯವಹಾರಕ್ಕೆ ಸಂಬಂಧಿಸಿದ ವೆಚ್ಚಗಳನ್ನು ನಿರ್ವಹಿಸಲು ಐಡಿಬಿಐ ಬ್ಯಾಂಕ್‌ನಲ್ಲಿ ಚಾಲ್ತಿ ಖಾತೆ ಹೊಂದಿದ್ದಾರೆ. ವೇತನ, ತೆರಿಗೆ, ವಿದ್ಯುತ್ ಹಾಗೂ ಇತರ ಉಪಯುಕ್ತ ಸೇವೆಗಳ ಬಿಲ್‌ಗಳು ಮತ್ತು ತೋಟದ ನಿರ್ವಹಣೆಯಂತಹ ವೆಚ್ಚಗಳಿಗೆ ಪಾವತಿ ಮಾಡಲು ಕೆಲವು ಸಹಿ ಮಾಡಿದ ಖಾಲಿ ಚೆಕ್‌ಗಳನ್ನು ತಮ್ಮ ಕೊಠಡಿಯಲ್ಲಿ ಇಟ್ಟುಕೊಂಡಿದ್ದರು.

ಈ ಖಾತೆಯನ್ನು ಈ ಹಿಂದೆ ‘ARS Garden Studio’ ಹೆಸರಿನಲ್ಲಿ ನಿರ್ವಹಿಸಲಾಗುತ್ತಿತ್ತು. 2025ರ ಜನವರಿಯಲ್ಲಿ ವ್ಯವಹಾರದ ಹೆಸರನ್ನು ‘RR Gardens’ ಎಂದು ಬದಲಾಯಿಸಿದ ಬಳಿಕ ಹೊಸ ಚೆಕ್‌ಬುಕ್ ಪಡೆದಿದ್ದಾಗಿ ರಾಧಾ ತಿಳಿಸಿದ್ದಾರೆ. ಹೀಗಾಗಿ ಹಳೆಯ ಚೆಕ್‌ಬುಕ್ ಬಳಕೆಯಲ್ಲಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಸೆಪ್ಟೆಂಬರ್ 17ರಂದು ಬ್ಯಾಂಕ್ ಅಧಿಕಾರಿಗಳು ತಮ್ಮನ್ನು ಸಂಪರ್ಕಿಸಿ, ಹಳೆಯ ಚೆಕ್‌ಬುಕ್‌ನ ಐದು ಚೆಕ್‌ಗಳನ್ನು ಅಂಬಿಕಾ ಅವರ ಹೆಸರಿನಲ್ಲಿ ಒಟ್ಟು ₹46 ಕೋಟಿ ಪಡೆಯಲು ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಂಬಿಕಾಗೆ ತಾವು ಯಾವುದೇ ಚೆಕ್ ನೀಡಿಲ್ಲ ಹಾಗೂ ₹46 ಕೋಟಿ ಪಾವತಿಗೆ ಸಂಬಂಧಿಸಿದ ಯಾವುದೇ ಹಣಕಾಸು ಒಪ್ಪಂದ ಮಾಡಿಕೊಂಡಿಲ್ಲ ಎಂದು ರಾಧಾ ಹೇಳಿದ್ದಾರೆ. ಮಾಹಿತಿ ತಿಳಿದ ತಕ್ಷಣ ಚೆಕ್‌ಗಳ ಪಾವತಿಯನ್ನು ತಡೆಹಿಡಿಯುವಂತೆ ಬ್ಯಾಂಕ್‌ಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ತಮ್ಮ ಸಹೋದರ ಮಲ್ಲಿಕಾರ್ಜುನ ಕುಂಜನ್ ನಾಯರ್ ಅವರು ಚೆಕ್‌ಗಳನ್ನು ಭರ್ತಿ ಮಾಡಿದ್ದಾರೆ ಎಂದು ರಾಧಾ ಆರೋಪಿಸಿದ್ದಾರೆ. ಅಂಬಿಕಾ ಮತ್ತು ಮಲ್ಲಿಕಾರ್ಜುನ ಕಾನೂನುಬಾಹಿರ ಆರ್ಥಿಕ ಲಾಭ ಪಡೆಯುವ ಉದ್ದೇಶದಿಂದ ಒಟ್ಟಾಗಿ ಕಾರ್ಯನಿರ್ವಹಿಸಿದ್ದಾರೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.
ಇದಲ್ಲದೆ, ಸುಮಾರು ಒಂದೂವರೆ ವರ್ಷದಿಂದ ತಮ್ಮ ಆಸ್ತಿಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿಲ್ಲ ಎಂದು ರಾಧಾ ದೂರಿದ್ದಾರೆ. ಆಸ್ತಿಯಲ್ಲಿ ಆಭರಣಗಳು, ಬೆಲೆಬಾಳುವ ವಸ್ತುಗಳು, ಆಸ್ತಿ ದಾಖಲೆಗಳು ಹಾಗೂ ಇತರ ಪ್ರಮುಖ ದಾಖಲೆಗಳಿವೆ ಎಂದು ತಿಳಿಸಿದ್ದಾರೆ.
ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪು ಸಾಬೀತಾದರೆ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ರಾಧಾ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಅಂಬಿಕಾ ಕನ್ನಡ ಚಿತ್ರರಂಗದಲ್ಲಿ ‘ಚಕ್ರವ್ಯೂಹ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದು, ಅಂಬರೀಶ್, ರವಿಚಂದ್ರನ್ ಸೇರಿದಂತೆ ಹಲವು ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಅವರ ಸಹೋದರಿ ರಾಧಾ ಕೂಡ 1980ರ ದಶಕದಲ್ಲಿ ತಮಿಳು ಚಿತ್ರರಂಗದ ಪ್ರಮುಖ ನಾಯಕಿಯರಲ್ಲಿ ಒಬ್ಬರಾಗಿದ್ದರು.
