ಸ್ಥಳೀಯ ಚುನಾವಣೆಗಳಿಗೆ ಬೆಲೆ ಏರಿಕೆ ವಿಚಾರವೇ ಬಿಜೆಪಿಗೆ ಅಸ್ತ್ರ; ಪಕ್ಷದ ಕಾರ್ಯಕರ್ತರಿಗೆ ಶಾಸಕ ಡಾ. ರವಿ ಸಿ.ಟಿ. ಕರೆ

ಚಿಕ್ಕಮಗಳೂರು: ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಈಗಿನಿಂದಲೇ ಸಂಘಟನಾತ್ಮಕವಾಗಿ ಸಜ್ಜಾಗಬೇಕು. ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ಜನವಿರೋಧಿ ಆಡಳಿತದ ಕುರಿತು ಗ್ರಾಮಮಟ್ಟದಲ್ಲಿ ಜನಜಾಗೃತಿ ಮೂಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಕರೆ ನೀಡಿದ್ದಾರೆ.
ಲಕ್ಯಾ ಮಹಾಶಕ್ತಿ ಕೇಂದ್ರದ ವತಿಯಿಂದ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರದ ಆಸೆಯಿಂದ ಪಕ್ಷಕ್ಕೆ ಬರುವವರಿಗಿಂತ ಸಿದ್ಧಾಂತ ಮತ್ತು ನಿಷ್ಠೆಗಾಗಿ ಪಕ್ಷದೊಂದಿಗೆ ನಿಲ್ಲುವ ಕಾರ್ಯಕರ್ತರೇ ಬಿಜೆಪಿಯ ಶಕ್ತಿ. ಪಕ್ಷದ ಜವಾಬ್ದಾರಿ ವಹಿಸಿಕೊಂಡಿರುವ ಪದಾಧಿಕಾರಿಗಳು ಅದನ್ನು ಅಧಿಕಾರವೆಂದು ಭಾವಿಸದೆ, ಎಲ್ಲ ಹಂತದ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸುವ ಹೊಣೆಗಾರಿಕೆಯಾಗಿ ನಿರ್ವಹಿಸಬೇಕು ಎಂದರು.
ಹಿಂದಿನ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನೇ ಕಾಂಗ್ರೆಸ್ ನಾಯಕರು ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಅವರು, ಭದ್ರಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ₹1,281 ಕೋಟಿ ಯೋಜನೆ ಹಾಗೂ ಬಹುಗ್ರಾಮ ಕುಡಿಯುವ ನೀರಿನ ₹1,400 ಕೋಟಿ ಯೋಜನೆಗಳಿಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಮಂಜೂರಾತಿ ದೊರೆತಿತ್ತು. ಮೆಡಿಕಲ್ ಕಾಲೇಜು, ಅರಣ್ಯ ಭವನ ಮತ್ತು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಸೇರಿದಂತೆ ಹಲವು ಕಾಮಗಾರಿಗಳೂ ಆಗಲೇ ಮಂಜೂರಾಗಿದ್ದವು. ಈಗ ಅವುಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನಡೆಸಿ ತಮ್ಮ ಸಾಧನೆ ಎಂದು ಹೇಳಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಗತ್ಯ ವಸ್ತುಗಳು ಮತ್ತು ಸೇವೆಗಳ ಬೆಲೆ ಹೆಚ್ಚಳವಾಗಿದೆ. ಜನನ ಮತ್ತು ಮರಣ ಪ್ರಮಾಣಪತ್ರಗಳ ಶುಲ್ಕ ₹5ರಿಂದ ₹50ಕ್ಕೆ ಏರಿಕೆಯಾಗಿದೆ. ₹20ರ ಸ್ಟಾಂಪ್ ಪೇಪರ್ಗಳ ಬೆಲೆ ₹100, ₹200 ಮತ್ತು ₹500ಕ್ಕೆ ತಲುಪಿದೆ. ಟ್ರಾನ್ಸ್ಫಾರ್ಮರ್ ಅಳವಡಿಕೆ ವೆಚ್ಚವೂ ಹಲವು ಪಟ್ಟು ಹೆಚ್ಚಾಗಿದೆ. ಗ್ಯಾರಂಟಿಗಳ ಹೆಸರಿನಲ್ಲಿ ಒಂದು ಕೈಯಲ್ಲಿ ಹಣ ನೀಡಿ, ಮತ್ತೊಂದೆಡೆ ಹಲವು ಪಟ್ಟು ಹಣವನ್ನು ಜನರಿಂದ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ 23 ಲಕ್ಷ ಜನರಿಗೆ ಪಿಂಚಣಿ ಪಾವತಿ ವಿಳಂಬವಾಗಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಅತಿಥಿ ಉಪನ್ಯಾಸಕರು ಹಾಗೂ ಇತರ ನೌಕರರ ವೇತನ ಪಾವತಿಯಲ್ಲಿಯೂ ವಿಳಂಬವಾಗುತ್ತಿದೆ. ಬರಪೀಡಿತ ತಾಲೂಕುಗಳ ಜನರು ಸಂಕಷ್ಟದಲ್ಲಿದ್ದರೂ ಸರ್ಕಾರ ಜನರ ಸಮಸ್ಯೆಗಳಿಗೆ ಆದ್ಯತೆ ನೀಡುತ್ತಿಲ್ಲ ಎಂದು ಟೀಕಿಸಿದರು.
ಲಕ್ಯಾ ಮಹಾಶಕ್ತಿ ಕೇಂದ್ರದ ಐದು ಪಂಚಾಯಿತಿಗಳಿಗೆ 2018ರಿಂದ 2023ರ ಅವಧಿಯಲ್ಲಿ ₹135.53 ಕೋಟಿ ಅಭಿವೃದ್ಧಿ ಅನುದಾನ ವೆಚ್ಚವಾಗಿದೆ. ಲಕ್ಯಾ ಹೋಬಳಿಗೆ ವಿವಿಧ ಯೋಜನೆಗಳಡಿ ಒಟ್ಟು ₹294.10 ಕೋಟಿ ಮಂಜೂರಾತಿ ದೊರಕಿಸಿಕೊಡಲಾಗಿತ್ತು ಎಂದು ತಿಳಿಸಿದರು. ಈ ಅನುದಾನ ಮತ್ತು ಕಾಮಗಾರಿಗಳ ಕುರಿತು ಸಮಗ್ರ ಲೆಕ್ಕವನ್ನು ಜನರ ಮುಂದಿಡಲು ಸಿದ್ಧವಿರುವುದಾಗಿ ಹೇಳಿದ ಅವರು, ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಪಂಚಾಯಿತಿಗಳಿಗೆ ದೊರೆತ ಅನುದಾನ ಮತ್ತು ಅಭಿವೃದ್ಧಿ ಕಾರ್ಯಗಳ ಲೆಕ್ಕವನ್ನೂ ಜನರು ಕೇಳಬೇಕು ಎಂದರು.
ಬಿಜೆಪಿ ಮತ್ತು ಜೆಡಿಎಸ್ ಎನ್ಡಿಎ ಭಾಗವಾಗಿದ್ದು, ಸ್ಥಳೀಯ ಮಟ್ಟದಲ್ಲಿಯೂ ಎರಡೂ ಪಕ್ಷಗಳ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಾಗಿ ಕೆಲಸ ಮಾಡಬೇಕು. ಪ್ರತಿ ಬೂತ್ನಲ್ಲಿ ಮಹಿಳಾ ಕಾರ್ಯಕರ್ತರು ಮತ್ತು ಯುವಕರನ್ನು ಗುರುತಿಸಿ ಜವಾಬ್ದಾರಿ ನೀಡಬೇಕು. ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸರ್ಕಾರದ ವೈಫಲ್ಯಗಳನ್ನು ತಿಳಿಸುವ ಮೂಲಕ ಮುಂಬರುವ ಚುನಾವಣೆಗಳಿಗೆ ಪಕ್ಷದ ಸಂಘಟನೆಯನ್ನು ಬಲಪಡಿಸಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಈಶ್ವರಳ್ಳಿ ಮಹೇಶ್, ಬೀಕನಹಳ್ಳಿ ಸೋಮಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ, ಲಕ್ಯಾ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕೆ.ಎಸ್. ಸದಾಶಿವ, ಗ್ರಾಮಾಂತರ ಮಂಡಲ ಅಧ್ಯಕ್ಷ ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಬೀಳೇಕಲ್ಲಹಳ್ಳಿ ಪ್ರಕಾಶ್, ರಾಜೀವ್, ದಿಲೀಪ್ ಹುಲಿಕೆರೆ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
