ವಾರದೊಳಗೆ ತುಮಕೂರಿಗೆ, ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಸಚಿವ ಚಲುವರಾಯಸ್ವಾಮಿ

0
Ettinahole-Cheluvarayaswamy

ಬೆಂಗಳೂರು: ವಾರದೊಳಗೆ ತುಮಕೂರಿಗೆ ಮತ್ತು ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ಯೋಜನೆಯ ನೀರು ಹರಿಸುವ ಗುರಿ ಹೊಂದಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಟ್ರಯಲ್ ರನ್‌ಗೆ ಅನುಮತಿ ನೀಡಿದರೆ ವಾರದೊಳಗೆ ತುಮಕೂರಿಗೆ ನೀರು ಹರಿಸಲಾಗುವುದು. ಡಿಸೆಂಬರ್ 15ರಿಂದ 25ರೊಳಗೆ ಟ್ರಯಲ್ ರನ್ ನಡೆಸಲು ಉದ್ದೇಶಿಸಲಾಗಿದೆ ಎಂದರು.

ಈಗಾಗಲೇ ಹಾಸನ, ಚಿಕ್ಕಮಗಳೂರು ಮತ್ತು ಕಡೂರಿಗೆ ಎತ್ತಿನಹೊಳೆ ನೀರು ಹರಿಯುತ್ತಿದೆ. ತಿಪಟೂರು, ಗುಬ್ಬಿವರೆಗಿನ ಕಾಮಗಾರಿಗಳು ಪೂರ್ಣಗೊಂಡಿವೆ. ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ನೀರು ತಲುಪಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಯೋಜನೆಗೆ ಈವರೆಗೆ ₹19 ಸಾವಿರ ಕೋಟಿ ವೆಚ್ಚವಾಗಿದ್ದು, ಒಟ್ಟು 252.61 ಕಿ.ಮೀ. ಕಾಮಗಾರಿಯಲ್ಲಿ 232 ಕಿ.ಮೀ. ಪೂರ್ಣಗೊಂಡಿದೆ. ಫೀಡರ್ ಕಾಲುವೆ ನಿರ್ಮಾಣಕ್ಕೆ ಐದು ಕಿ.ಮೀ. ಕಾಮಗಾರಿ ಬಾಕಿಯಿದೆ. ಯೋಜನೆಯಡಿ 527 ಕೆರೆಗಳನ್ನು ತುಂಬಿಸುವ ಗುರಿಯಿದೆ.

ಜೂನ್‌ನಿಂದ ಅಕ್ಟೋಬರ್‌ವರೆಗೆ 24 ಟಿಎಂಸಿ ನೀರು ಲಿಫ್ಟ್ ಮಾಡಲು ಅನುಮತಿಯಿದ್ದು, ನೀರನ್ನು ಸಂಗ್ರಹಿಸಿ ವರ್ಷಪೂರ್ತಿ ಬಳಸಿಕೊಳ್ಳಲಾಗುವುದು. ಕಾಮಗಾರಿ ಪೂರ್ಣಗೊಳಿಸಲು ಫೆಬ್ರವರಿಯೊಳಗೆ ₹2,000 ಕೋಟಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

Leave a Reply

Your email address will not be published. Required fields are marked *