ಕೃಷಿ ಸಂಶೋಧನೆ, ತಂತ್ರಜ್ಞಾನ ವರ್ಗಾವಣೆಗೆ ಭಾರತ–ಘಾನಾ ಒಪ್ಪಂದ

0
Agreement-MOU-Co-operation

ನವದೆಹಲಿ: ಕೃಷಿ ಸಂಶೋಧನೆ, ಶಿಕ್ಷಣ, ತಂತ್ರಜ್ಞಾನ ವರ್ಗಾವಣೆ ಹಾಗೂ ವಾಣಿಜ್ಯೀಕರಣ ಕ್ಷೇತ್ರಗಳಲ್ಲಿ ಸಹಕಾರ ಬಲಪಡಿಸಲು ಭಾರತ ಮತ್ತು ಘಾನಾ ಐದು ವರ್ಷಗಳ ತಿಳುವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಿವೆ.

ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಹಾಗೂ ಘಾನಾದ ಬೆಳೆ ಸಂಶೋಧನಾ ಸಂಸ್ಥೆ (CSIR-CRI), ಅಕ್ರಾ ನಡುವೆ ಒಪ್ಪಂದ ನಡೆದಿದೆ. ಸಹಿ ಸಮಾರಂಭದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹಾಗೂ ಘಾನಾದ ವಿದೇಶಾಂಗ ಸಚಿವ ಸ್ಯಾಮುಯೆಲ್ ಒಕುಡ್ಜೆಟೊ ಅಬ್ಲಕ್ವಾ ಉಪಸ್ಥಿತರಿದ್ದರು.

ಒಪ್ಪಂದದಡಿ ಜಂಟಿ ಕೃಷಿ ಸಂಶೋಧನೆ, ವೈಜ್ಞಾನಿಕ–ತಾಂತ್ರಿಕ ವಿನಿಮಯ, ಸಾಮರ್ಥ್ಯವರ್ಧನೆ ಹಾಗೂ ಕೃಷಿ ತಂತ್ರಜ್ಞಾನಗಳ ಅನ್ವಯ ಮತ್ತು ವಾಣಿಜ್ಯೀಕರಣಕ್ಕೆ ಒತ್ತು ನೀಡಲಾಗುವುದು. ನಿರ್ದಿಷ್ಟ ಸಂಶೋಧನೆ ಮತ್ತು ವಾಣಿಜ್ಯೀಕರಣ ಚಟುವಟಿಕೆಗಳಿಗೆ ಘಾನಾದ ಅರಿಮಾ ಫಾರ್ಮ್ಸ್ ಲಿಮಿಟೆಡ್‌ ಅನ್ನು CSIR-CRIಯ ವಾಣಿಜ್ಯ ಪಾಲುದಾರನಾಗಿ ಗುರುತಿಸಲಾಗಿದೆ.

ಸಹಕಾರದ ಮೊದಲ ಹಂತದಲ್ಲಿ ತರಕಾರಿ ಬೆಳೆ ಸಂಶೋಧನೆ, ವಿಶೇಷವಾಗಿ ಟೊಮೆಟೊ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಘಾನಾದಲ್ಲಿ ಟೊಮೆಟೊ ಉತ್ಪಾದನೆ ಹೆಚ್ಚಿಸಲು ICAR ತನ್ನ ಸಾಬೀತಾದ ತಂತ್ರಜ್ಞಾನಗಳ ವಿಸ್ತರಣೆ ಹಾಗೂ ಹೆಚ್ಚಿನ ಇಳುವರಿ ನೀಡುವ ಸೂಕ್ತ ತಳಿಗಳ ಪರಿಚಯಕ್ಕೆ ನೆರವಾಗಲಿದೆ.

ಕಸಾವ, ಗೆಣಸು ಸೇರಿದಂತೆ ಗೆಡ್ಡೆ ಬೆಳೆಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೂ ಸಹಕಾರ ವಿಸ್ತರಿಸಲಾಗುವುದು. ಕೊಯ್ಲಿನ ನಂತರದ ನಷ್ಟ ಕಡಿಮೆ ಮಾಡಲು ಶೀತಗೃಹ, ಶೈತ್ಯೀಕರಿಸಿದ ಸಾರಿಗೆ, ವಿಂಗಡಣೆ, ಶ್ರೇಣೀಕರಣ ಮತ್ತು ಸಂಸ್ಕರಣಾ ತಂತ್ರಜ್ಞಾನಗಳಲ್ಲೂ ತಾಂತ್ರಿಕ ನೆರವು ನೀಡಲಾಗುವುದು.

ವಿಜ್ಞಾನಿಗಳು ಮತ್ತು ತಂತ್ರಜ್ಞರ ವಿನಿಮಯ, ಜರ್ಮ್‌ಪ್ಲಾಸಂ ಹಾಗೂ ಸಂತಾನೋತ್ಪತ್ತಿ ಸಾಮಗ್ರಿ, ವೈಜ್ಞಾನಿಕ ಮಾಹಿತಿ ಮತ್ತು ತಾಂತ್ರಿಕ ಜ್ಞಾನ ಹಂಚಿಕೆಗೂ ಒಪ್ಪಂದ ಅವಕಾಶ ಕಲ್ಪಿಸಿದೆ. ಎರಡೂ ದೇಶಗಳ ಸಂಶೋಧನಾ ಸಂಸ್ಥೆಗಳ ನಡುವೆ ಜಂಟಿ ಸಂಶೋಧನಾ ಯೋಜನೆಗಳಿಗೂ ಉತ್ತೇಜನ ನೀಡಲಾಗುವುದು.

ICAR ಮತ್ತು CSIR-CRI ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಕಾರ್ಯನಿರತ ಗುಂಪು ಸಹಕಾರದ ಪ್ರಗತಿಯನ್ನು ಪರಿಶೀಲಿಸಿ, ಅನುಷ್ಠಾನಕ್ಕೆ ಮಾರ್ಗದರ್ಶನ ನೀಡಲಿದೆ. ಗುಂಪು ನವದೆಹಲಿ ಮತ್ತು ಅಕ್ರಾದಲ್ಲಿ ನಿಯಮಿತವಾಗಿ ಸಭೆ ನಡೆಸಲಿದೆ.

ಈ ಸಹಭಾಗಿತ್ವವು ಕೃಷಿ ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ, ಸಾಮರ್ಥ್ಯವರ್ಧನೆ ಮತ್ತು ವಾಣಿಜ್ಯ ಅನ್ವಯಿಕೆಗಳ ನಡುವಿನ ಸಂಪರ್ಕವನ್ನು ಬಲಪಡಿಸುವ ನಿರೀಕ್ಷೆಯಿದೆ. ಇದರಿಂದ ಘಾನಾದಲ್ಲಿ ಸುಸ್ಥಿರ ಕೃಷಿ ಅಭಿವೃದ್ಧಿ ಹಾಗೂ ರೈತರ ಜೀವನೋಪಾಯ ಸುಧಾರಣೆಗೆ ನೆರವಾಗಲಿದೆ.

Leave a Reply

Your email address will not be published. Required fields are marked *