ಅತ್ಯುತ್ತಮ ಪಂಚಾಯಿತಿಗೆ ‘ರಾಮಕೃಷ್ಣ ಹೆಗಡೆ ಶ್ರೇಷ್ಠ ಪಂಚಾಯಿತಿ ಪ್ರಶಸ್ತಿ’

ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ರಾಜ್ಯ ಸರ್ಕಾರವು ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ರಾಮಕೃಷ್ಣ ಹೆಗಡೆ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರೊಂದಿಗೆ ಉದ್ಘಾಟಿಸಿ ಮಾತನಾಡಿದ ಶಿವಕುಮಾರ್, ಹೆಗಡೆ ಅವರ ಹೆಸರನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಮೆಡಿಕಲ್ ಕಾಲೇಜಿಗೆ ಹಾಗೂ ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆಯ ಪ್ರಮುಖ ರಸ್ತೆಯೊಂದಕ್ಕೆ ಅವರ ಹೆಸರಿಡಲು ನಿರ್ಧರಿಸಲಾಗಿದೆ ಎಂದರು.
ಗ್ರಾಮೀಣ ಆಡಳಿತ ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಗೆ ರಾಮಕೃಷ್ಣ ಹೆಗಡೆ ನೀಡಿದ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಪ್ರತಿ ವರ್ಷ ಅವರ ಜನ್ಮದಿನದಂದು ಅತ್ಯುತ್ತಮ ಪಂಚಾಯಿತಿಗೆ ‘ರಾಮಕೃಷ್ಣ ಹೆಗಡೆ ಶ್ರೇಷ್ಠ ಪಂಚಾಯಿತಿ ಪ್ರಶಸ್ತಿ’ ನೀಡಲು ಕಾರ್ಯಕ್ರಮ ರೂಪಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸೂಚಿಸಲಾಗಿದೆ ಎಂದು ಹೇಳಿದರು.

ಹೆಗಡೆ ಅವರು ಕೇವಲ ಅಧಿಕಾರ ನಡೆಸಿದ ನಾಯಕರಲ್ಲ. ಪಂಚಾಯತ್ನಿಂದ ಸಂಸತ್ತಿನವರೆಗೆ ಹೊಸ ನಾಯಕರನ್ನು ಬೆಳೆಸಿದ ನಾಯಕ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಕರ್ನಾಟಕದ ಪ್ರಯೋಗಗಳು ದೇಶಕ್ಕೆ ಮಾದರಿಯಾಗಿದ್ದವು. ಬಳಿಕ 73 ಮತ್ತು 74ನೇ ಸಂವಿಧಾನ ತಿದ್ದುಪಡಿಗಳಿಗೆ ಈ ಚಿಂತನೆ ಪ್ರೇರಣೆಯಾಯಿತು ಎಂದು ಶಿವಕುಮಾರ್ ಹೇಳಿದರು.
ಜಾತಿ ಆಧಾರಿತ ರಾಜಕಾರಣಕ್ಕೆ ಸೀಮಿತವಾಗದೆ ಮೌಲ್ಯಾಧಾರಿತ ರಾಜಕಾರಣ ಹಾಗೂ ಸಾಮಾಜಿಕ ನ್ಯಾಯಕ್ಕೆ ಹೆಗಡೆ ಆದ್ಯತೆ ನೀಡಿದ್ದರು. ಅಧಿಕಾರವನ್ನು ಶಕ್ತಿಯ ಸಂಕೇತವಾಗಿ ನೋಡದೆ ಜನಸೇವೆಯ ಅವಕಾಶವೆಂದು ಪರಿಗಣಿಸಿದ್ದರು ಎಂದರು.
ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣದ ವಿಸ್ತರಣೆಗೆ ಹೆಗಡೆ ಅವರ ಕಾಲದ ನೀತಿಗಳು ನೆರವಾದವು. ಖಾಸಗಿ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೂ ಅವು ದಾರಿ ಮಾಡಿಕೊಟ್ಟಿದ್ದು, ಇಂದು ಕರ್ನಾಟಕ ಈ ಕ್ಷೇತ್ರಗಳಲ್ಲಿ ದೇಶದ ಮುಂಚೂಣಿ ರಾಜ್ಯವಾಗಿದೆ ಎಂದು ಶಿವಕುಮಾರ್ ಹೇಳಿದರು.
ರಾಮಕೃಷ್ಣ ಹೆಗಡೆ ಅವರ ಮೌಲ್ಯಾಧಾರಿತ ರಾಜಕಾರಣ ಮತ್ತು ಅಭಿವೃದ್ಧಿ ಚಿಂತನೆಗಳನ್ನು ಮುಂದುವರಿಸುವ ಬದ್ಧತೆಯನ್ನು ಸರ್ಕಾರ ಹೊಂದಿದೆ ಎಂದು ಅವರು ತಿಳಿಸಿದರು.
