ಹನೂರು ‘ಎನ್‌ಕೌಂಟರ್’ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಜೆಡಿಎಸ್ ಆಗ್ರಹ

0
jds-flag-300x161-1-1

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅರಣ್ಯದಂಚಿನಲ್ಲಿ ಮೂವರು ರೈತರು ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿನ ದಾಳಿಯಲ್ಲಿ ಮೃತಪಟ್ಟಿರುವ ಘಟನೆಗೆ ಜೆಡಿಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದು ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಅರಣ್ಯ ಇಲಾಖೆಯ ದರ್ಪಕ್ಕೆ ಸಾಕ್ಷಿ ಎಂದು ಆರೋಪಿಸಿರುವ ಪಕ್ಷ, ಘಟನೆ ಕುರಿತು ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಜೆಡಿಎಸ್, ಮೃತಪಟ್ಟವರು ಹಸು ಹುಡುಕಲು ತೆರಳಿದ್ದ ಅಮಾಯಕ ರೈತರು ಎಂದು ಹೇಳಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸುಳ್ಳು ಕಥೆ ಕಟ್ಟಿಕೊಂಡು ಕೊಲೆ ಮಾಡಿದ್ದರೆ, ಸಾಕ್ಷ್ಯ ನಾಶಕ್ಕೆ ಯತ್ನಿಸಿರುವ ಅಧಿಕಾರಿಗಳ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದೆ.

ಮೂವರ ಸಾವನ್ನು ‘ನಕಲಿ ಎನ್‌ಕೌಂಟರ್’ ಎಂದು ಆರೋಪಿಸಿರುವ ಜೆಡಿಎಸ್, ಮೃತಪಟ್ಟವರ ಕುಟುಂಬಗಳಿಗೆ ತಲಾ ₹25 ಲಕ್ಷ ಪರಿಹಾರ ನೀಡಬೇಕು ಹಾಗೂ ಪ್ರತಿ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ಕಲ್ಪಿಸಬೇಕು ಎಂದು ಒತ್ತಾಯಿಸಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾಗಿ ಹೇಳುತ್ತಿರುವುದು ಅನುಮಾನ ಮೂಡಿಸಿದೆ ಎಂದು ಪಕ್ಷ ಪ್ರಶ್ನಿಸಿದೆ. ಅರಣ್ಯ ಸಿಬ್ಬಂದಿ ಮೇಲೆ ಗುಂಡು ಹಾರಿಸಲಾಗಿದ್ದರೆ ಯಾವುದೇ ಸಿಬ್ಬಂದಿಗೆ ಗಾಯವಾಗದಿರುವುದು ಹೇಗೆ ಎಂದು ಪ್ರಶ್ನಿಸಿರುವ ಜೆಡಿಎಸ್, ಮೃತದೇಹಗಳನ್ನು ಕಾನೂನು ಪ್ರಕ್ರಿಯೆ ಪಾಲಿಸದೆ ಸ್ಥಳಾಂತರಿಸಿರುವುದು ಗಂಭೀರ ಲೋಪ ಎಂದು ಆರೋಪಿಸಿದೆ.

ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆ ಅಗತ್ಯವಾದರೂ, ಕಾಡನ್ನೇ ನಂಬಿ ಬದುಕುವ ಸ್ಥಳೀಯರು ಮತ್ತು ಬಡ ರೈತರ ಜೀವಕ್ಕೆ ಅಪಾಯ ಉಂಟಾಗುವುದನ್ನು ಸಹಿಸುವುದಿಲ್ಲ ಎಂದು ಜೆಡಿಎಸ್ ಹೇಳಿದೆ.

Leave a Reply

Your email address will not be published. Required fields are marked *