ಶಾರುಖ್ ಖಾನ್ ಬಳಿಕ ರಾಣಿಗೆ ಗೌರವ; ಸಿನಿಮಾ, ಸಾಮಾಜಿಕ ಸೇವೆಗಾಗಿ ಗೌರವ ಡಾಕ್ಟರೇಟ್

0
Rani-Mukharji-1

ಮುಂಬೈ: ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರು ಆಸ್ಟ್ರೇಲಿಯಾದ ಲಾ ಟ್ರೋಬ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರ್ ಆಫ್ ಲೆಟರ್ಸ್ ಪದವಿ ಸ್ವೀಕರಿಸುವ ವೇಳೆ ಭಾವುಕರಾದರು. ಗೌರವ ಸ್ವೀಕರಿಸುವ ಮುನ್ನ ಅವರು ಕಣ್ಣೀರು ಒರೆಸಿಕೊಂಡ ದೃಶ್ಯ ಗಮನ ಸೆಳೆಯಿತು.

2026ರ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ (IFFM) ಅಂಗವಾಗಿ ಮೆಲ್ಬೋರ್ನ್‌ನ ಫೆಡರೇಶನ್ ಸ್ಕ್ವೇರ್‌ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ರಾಣಿಯನ್ನು ಸನ್ಮಾನಿಸಲಾಯಿತು. ಮೂರು ದಶಕಗಳಿಗೂ ಹೆಚ್ಚು ಕಾಲದ ಅವರ ಸಿನಿಮಾ ಪಯಣ ಹಾಗೂ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.

ಚಿತ್ರರಂಗದ ಸಾಧನೆಯ ಜೊತೆಗೆ ಮಹಿಳೆಯರು, ಮಕ್ಕಳು ಮತ್ತು ಅಂಚಿನ ಸಮುದಾಯಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ರಾಣಿ ಮುಖರ್ಜಿ ಅವರ ಮಾನವೀಯ ಕಾರ್ಯ ಹಾಗೂ ಸಾಮಾಜಿಕ ಬದ್ಧತೆಯನ್ನೂ ವಿಶ್ವವಿದ್ಯಾಲಯ ಗುರುತಿಸಿದೆ.

ಗೌರವ ಸ್ವೀಕರಿಸಿದ ಬಳಿಕ ಮಾತನಾಡಿದ ರಾಣಿ, ಲಾ ಟ್ರೋಬ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆಯುತ್ತಿರುವುದು ತಮ್ಮ ಜೀವನದ ಅತ್ಯಂತ ವಿನಮ್ರ ಕ್ಷಣಗಳಲ್ಲಿ ಒಂದಾಗಿದೆ ಎಂದು ಹೇಳಿದರು. ಆಸ್ಟ್ರೇಲಿಯಾದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಸಿನಿಮಾವನ್ನು ಆಚರಿಸಲಾಗುತ್ತಿರುವ ಸಂದರ್ಭದಲ್ಲಿ ಈ ಗೌರವ ದೊರೆತಿರುವುದು ಭಾರತೀಯಳಾಗಿ ಹೆಮ್ಮೆ ತಂದಿದೆ ಎಂದರು.

ಲಾ ಟ್ರೋಬ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರ್ ಆಫ್ ಲೆಟರ್ಸ್ ಪಡೆದ ಎರಡನೇ ಭಾರತೀಯ ಚಲನಚಿತ್ರ ಕ್ಷೇತ್ರದ ವ್ಯಕ್ತಿತ್ವ ಎಂಬ ಹೆಗ್ಗಳಿಕೆಗೆ ರಾಣಿ ಮುಖರ್ಜಿ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ನಟ ಶಾರುಖ್ ಖಾನ್ ಅವರಿಗೆ ಈ ಗೌರವ ಲಭಿಸಿತ್ತು.

Leave a Reply

Your email address will not be published. Required fields are marked *

You may have missed