ಹಿರಿಯ ಬಿಜೆಪಿ ನಾಯಕ ರಾಮಚಂದ್ರ ಗೌಡ ನಿಧನ; ನಾಯಕರ ಕಂಬನಿ

0
Ramachandre-gowda-300x198-1

ಬೆಂಗಳೂರು: ಹಿರಿಯ ಬಿಜೆಪಿ ನಾಯಕ, ಮಾಜಿ ಸಚಿವ ರಾಮಚಂದ್ರ ಗೌಡ (88) ಅವರು ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು. ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿ ತೊಡಗಿದ್ದ ಅವರು ಜನಸಂಘದ ಕಾಲದಿಂದಲೇ ಪಕ್ಷ ಸಂಘಟನೆಯಲ್ಲಿ ಕೆಲಸ ಮಾಡಿದ್ದು, ಕರ್ನಾಟಕದಲ್ಲಿ ಬಿಜೆಪಿ ಬಲವರ್ಧನೆಗೆ ಮಹತ್ವದ ಕೊಡುಗೆ ನೀಡಿದ್ದರು. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲೂ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಬಿಜೆಪಿ ನಾಯಕ ಸಿ.ಟಿ. ರವಿ, ರಾಮಚಂದ್ರ ಗೌಡರನ್ನು ಪಕ್ಷದ ಸಂಸ್ಥಾಪಕ ಸದಸ್ಯರು, ಮಾರ್ಗದರ್ಶಕರು ಹಾಗೂ ಕಾರ್ಯಕರ್ತರ ಪ್ರೇರಣಾಸ್ತಂಭ ಎಂದು ಸ್ಮರಿಸಿದ್ದಾರೆ.

“ರಾಮಚಂದ್ರ ಗೌಡರು ಕೇವಲ ಹಿರಿಯ ರಾಜಕಾರಣಿಯಲ್ಲ; ಸಾವಿರಾರು ಕಾರ್ಯಕರ್ತರಿಗೆ ಧೈರ್ಯ ತುಂಬಿದ, ತಪ್ಪು ತಿದ್ದಿ ದಾರಿತೋರಿಸಿದ ಹಿರಿಯರಾಗಿದ್ದರು. ಅಧಿಕಾರದಲ್ಲಿದ್ದರೂ ಸರಳತೆ, ಸಜ್ಜನಿಕೆ, ಸಿದ್ಧಾಂತನಿಷ್ಠೆ ಹಾಗೂ ಕಾರ್ಯಕರ್ತರ ಮೇಲಿನ ಪ್ರೀತಿಯನ್ನು ಎಂದಿಗೂ ಬಿಟ್ಟಿರಲಿಲ್ಲ,” ಎಂದು ಹೇಳಿದ್ದಾರೆ.

1992ರ ಚಿಕ್ಕಮಗಳೂರು ಯುವ ಸಮಾವೇಶದಲ್ಲಿ ಯುವ ಕಾರ್ಯಕರ್ತರಿಗೆ ಅವರು ನೀಡಿದ ಪ್ರೋತ್ಸಾಹ ತಮ್ಮ ರಾಜಕೀಯ ಬದುಕಿನಲ್ಲಿ ಮರೆಯಲಾಗದ ಕ್ಷಣ ಎಂದು ಸಿ.ಟಿ. ರವಿ ನೆನಪಿಸಿಕೊಂಡಿದ್ದಾರೆ.

“ಅವರ ಅಗಲಿಕೆಯಿಂದ ಕರ್ನಾಟಕ ಒಬ್ಬ ಹಿರಿಯ ಮುತ್ಸದ್ದಿಯನ್ನು, ಬಿಜೆಪಿ ಅಪರೂಪದ ಸಿದ್ಧಾಂತವಾದಿಯನ್ನು ಕಳೆದುಕೊಂಡಿದೆ. ವೈಯಕ್ತಿಕವಾಗಿ ನನ್ನನ್ನು ಆಶೀರ್ವದಿಸುತ್ತಿದ್ದ ಹಿರಿಯರನ್ನು ಕಳೆದುಕೊಂಡಿರುವ ನೋವು ಕಾಡುತ್ತಿದೆ. ಅವರು ಬಿಟ್ಟುಹೋದ ಆದರ್ಶಗಳು ಮತ್ತು ರಾಷ್ಟ್ರಭಕ್ತಿಯ ಸಂದೇಶ ಸದಾ ನಮ್ಮೆಲ್ಲರಿಗೂ ದಾರಿದೀಪವಾಗಿರಲಿದೆ,” ಎಂದು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *