ಲೆಬನಾನ್ ಮೇಲಿನ ದಾಳಿ ನಿಲ್ಲಿಸಿ; ಇಸ್ರೇಲ್‌ಗೆ ಇರಾನ್ ಕಠಿಣ ಎಚ್ಚರಿಕೆ

0
Iran-Israel-war-Tehran-1-400x400-1-300x300-1

ಟೆಹ್ರಾನ್: ದಕ್ಷಿಣ ಲೆಬನಾನ್ ಮತ್ತು ಬೈರುತ್‌ನ ದಹಿಹ್ ಪ್ರದೇಶದ ಮೇಲಿನ ದಾಳಿಗಳನ್ನು ಮುಂದುವರಿಸಿದರೆ ಇಸ್ರೇಲ್ ಇನ್ನಷ್ಟು ಕಠಿಣ ಮತ್ತು ವಿನಾಶಕಾರಿ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್ ಎಚ್ಚರಿಕೆ ನೀಡಿದೆ.

ಇರಾನ್‌ನ ಖತಮ್ ಅಲ್-ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿಯ ಮುಖ್ಯ ಕಮಾಂಡರ್ ಅಲಿ ಅಬ್ದುಲ್ಲಾಹಿ, ಲೆಬನಾನ್ ವಿರುದ್ಧದ ದಾಳಿಗಳನ್ನು ಇಸ್ರೇಲ್ ತಕ್ಷಣ ನಿಲ್ಲಿಸಬೇಕು. ಇಲ್ಲವಾದರೆ ಇಸ್ರೇಲ್ ಹಾಗೂ ಅದರ ಬೆಂಬಲಿಗರ ವಿರುದ್ಧ ವ್ಯಾಪಕ ಪ್ರತಿದಾಳಿ ನಡೆಯಲಿದೆ ಎಂದು ಹೇಳಿದ್ದಾರೆ.

ಅಮೆರಿಕದ ಬೆಂಬಲ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಮೌನದಿಂದ ಇಸ್ರೇಲ್ ಲೆಬನಾನ್‌ನಲ್ಲಿ ತನ್ನ ದಾಳಿಗಳನ್ನು ತೀವ್ರಗೊಳಿಸಿದೆ ಎಂದು ಆರೋಪಿಸಿರುವ ಅಬ್ದುಲ್ಲಾಹಿ, ನಿಷೇಧಿತ ಶಸ್ತ್ರಾಸ್ತ್ರಗಳ ಬಳಕೆ ಸೇರಿದಂತೆ ಯುದ್ಧ ಅಪರಾಧಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

ಇದರ ನಡುವೆ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಉತ್ತರ ಇಸ್ರೇಲ್‌ನ ರಾಮತ್ ಡೇವಿಡ್ ವಾಯುನೆಲೆ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಹೇಳಿದೆ. ಲೆಬನಾನ್ ವಿರುದ್ಧದ ಕಾರ್ಯಾಚರಣೆಗಳಿಗೆ ಈ ವಾಯುನೆಲೆಯನ್ನು ಬಳಸಲಾಗುತ್ತಿದೆ ಎಂದು ಐಆರ್‌ಜಿಸಿ ಆರೋಪಿಸಿದೆ.

ಏಪ್ರಿಲ್ 8ರಂದು ಜಾರಿಗೆ ಬಂದ ಕದನ ವಿರಾಮದ ಷರತ್ತುಗಳನ್ನು ಇಸ್ರೇಲ್ ಮತ್ತು ಅಮೆರಿಕ ಉಲ್ಲಂಘಿಸುತ್ತಿವೆ ಎಂದು ಇರಾನ್ ಆರೋಪಿಸಿದ್ದು, ಲೆಬನಾನ್ ಮೇಲಿನ ದಾಳಿಗಳು ಮುಂದುವರಿದರೆ ಪ್ರತಿಕ್ರಿಯೆ ಮತ್ತಷ್ಟು ವಿಸ್ತಾರವಾಗಲಿದೆ ಎಂದು ಎಚ್ಚರಿಸಿದೆ.

ಇರಾನ್‌ನ ಸರ್ವೋಚ್ಚ ನಾಯಕನ ಮಿಲಿಟರಿ ಸಲಹೆಗಾರ ಮೊಹ್ಸೆನ್ ರೆಝಾಯಿ ಸಹ, “ಲೆಬನಾನ್ ವಿರುದ್ಧದ ಯಾವುದೇ ಹೊಸ ಆಕ್ರಮಣಕ್ಕೆ ಇನ್ನಷ್ಟು ಕಠಿಣ ಪ್ರತಿಕ್ರಿಯೆ ಸಿಗಲಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಈ ಬೆಳವಣಿಗೆಗಳ ನಡುವೆಯೇ ಭದ್ರತಾ ಕಾರಣಗಳಿಂದ ಇರಾನ್ ತನ್ನ ಪಶ್ಚಿಮ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಪಶ್ಚಿಮ ಏಷ್ಯಾದಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಮೇಲೆ ಜಾಗತಿಕ ಸಮುದಾಯದ ಗಮನ ಕೇಂದ್ರೀಕೃತವಾಗಿದೆ.

Leave a Reply

Your email address will not be published. Required fields are marked *