ಕೇಂದ್ರ ಬಜೆಟ್‌: ಬಟ್ಟೆ, ಚರ್ಮದ ವಸ್ತುಗಳು, ಕ್ಯಾನ್ಸರ್ ಔಷಧಿಗಳು, ಸ್ಮಾರ್ಟ್‌ಫೋನ್‌ಗಳು ಅಗ್ಗ, ಮದ್ಯ ದುಬಾರಿ

0
Nirmala Seetharaman - Union Budget 2026

ನವದೆಹಲಿ: ಬಹು ನಿರೀಕ್ಷಿತ ಕೇಂದ್ರ ಬಜೆಟ್‌ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಮಂಡಿಸಿದ್ದು, ಇದು ಅವರ ದಾಖಲೆಯ ಒಂಬತ್ತನೇ ಬಜೆಟ್‌ ಆಗಿದೆ. ವಿವಿಧ ವಲಯಗಳಿಗೆ ಉತ್ತೇಜನ ನೀಡುವ ಜೊತೆಗೆ, ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುವ ತೆರಿಗೆ ಮತ್ತು ಸುಂಕ ಸಂಬಂಧಿತ ಹಲವು ಮಹತ್ವದ ನಿರ್ಣಯಗಳನ್ನು ಅವರು ಪ್ರಕಟಿಸಿದ್ದಾರೆ.

ಪ್ರತಿ ಬಜೆಟ್‌ನಂತೆ ಈ ಬಾರಿಯೂ ‘ಯಾವ ವಸ್ತು ಅಗ್ಗವಾಗಲಿದೆ? ಯಾವುದು ದುಬಾರಿಯಾಗಲಿದೆ?’ ಎಂಬ ಕುತೂಹಲ ಸಹಜವಾಗಿದೆ. ಕೇಂದ್ರ ಬಜೆಟ್‌ನಲ್ಲಿ ಕೆಲವು ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗುವ ಸೂಚನೆ ದೊರೆತಿದ್ದರೆ, ಕೆಲವು ವಸ್ತುಗಳ ಮೇಲೆ ಹೆಚ್ಚುವರಿ ತೆರಿಗೆ ಬಿದ್ದಿದೆ.

ಅಗ್ಗವಾಗಲಿರುವ ವಸ್ತುಗಳು

ಚರ್ಮ ಮತ್ತು ಜವಳಿ ಉಡುಪು ರಫ್ತು ವಲಯಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಅವುಗಳ ಕಚ್ಚಾ ವಸ್ತುಗಳ ಆಮದು ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ. ಲಿಥಿಯಂ–ಐಯಾನ್ ಸೆಲ್ ತಯಾರಿಕೆಗೆ ಬಳಸುವ ವಸ್ತುಗಳ ಮೇಲೆ ಕಸ್ಟಮ್ಸ್ ಸುಂಕ ವಿನಾಯಿತಿ ನೀಡಲಾಗಿದ್ದು, ಇದರಿಂದ ವಿದ್ಯುತ್ ವಾಹನಗಳ ಬ್ಯಾಟರಿಗಳು ಅಗ್ಗವಾಗುವ ನಿರೀಕ್ಷೆಯಿದೆ. ಇದು ಇವಿ ವಲಯಕ್ಕೆ ದೊಡ್ಡ ಬೆಂಬಲವಾಗಿದೆ.

ಇದೇ ರೀತಿ, ಮೈಕ್ರೋವೇವ್ ಓವನ್ ತಯಾರಿಕೆಯಲ್ಲಿ ಬಳಸುವ ಘಟಕಗಳ ಮೇಲೆ ಮೂಲ ಕಸ್ಟಮ್ಸ್ ಸುಂಕವನ್ನು ರದ್ದುಪಡಿಸಲಾಗಿದೆ. ವೈಯಕ್ತಿಕ ಬಳಕೆಗೆ ಆಮದು ಮಾಡಿಕೊಳ್ಳುವ ಎಲ್ಲಾ ಸುಂಕ ವಿಧಿಸಬಹುದಾದ ಸರಕುಗಳ ಮೇಲಿನ ಸುಂಕವನ್ನು ಶೇ.10ಕ್ಕೆ ಇಳಿಸಲಾಗಿದೆ. ಕ್ಯಾನ್ಸರ್‌ ರೋಗಿಗಳಿಗೆ ಅಗತ್ಯವಿರುವ 17 ಔಷಧಿಗಳ ಮೇಲೆ ಮೂಲ ಕಸ್ಟಮ್ಸ್ ಸುಂಕ ವಿನಾಯಿತಿ ನೀಡಲಾಗಿದ್ದು, ಇತರ ಏಳು ಗಂಭೀರ ಅನಾರೋಗ್ಯದ ಔಷಧಿಗಳಿಗೂ ಖಾಸಗಿ ಆಮದು ಸುಂಕ ವಿನಾಯಿತಿ ಘೋಷಿಸಲಾಗಿದೆ.

ಪರಮಾಣು ಯೋಜನೆಗಳು ಹಾಗೂ ಪ್ರಮುಖ ಖನಿಜಗಳ ಸಂಸ್ಕರಣೆಗೆ ಬೇಕಾದ ಸರಕುಗಳ ಆಮದಿನ ಮೇಲಿನ ಸುಂಕ ವಿನಾಯಿತಿ ಮುಂದುವರೆಯಲಿದೆ. ರಕ್ಷಣಾ ವಲಯದಲ್ಲಿಯೂ ಮೂಲ ಕಸ್ಟಮ್ಸ್ ಸುಂಕವನ್ನು ಮನ್ನಾ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.

ದುಬಾರಿಯಾಗಲಿರುವ ವಸ್ತುಗಳು

ಬಜೆಟ್‌ನಲ್ಲಿ ಮದ್ಯದ ಮೇಲಿನ ತೆರಿಗೆ ಹೆಚ್ಚಿಸಲಾಗಿದ್ದು, ಇದರ ಪರಿಣಾಮವಾಗಿ ಮದ್ಯದ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಜೊತೆಗೆ ಸಿಗರೇಟ್‌, ಪಾನ್‌ ಮಸಾಲಾ ಸೇರಿದಂತೆ ತಂಬಾಕು ಉತ್ಪನ್ನಗಳೂ ದುಬಾರಿಯಾಗಲಿವೆ.

ಅಗ್ಗವಾಗಲಿರುವವು:

  • ಬಟ್ಟೆಗಳು
  • ಚರ್ಮದ ವಸ್ತುಗಳು ಮತ್ತು ಉತ್ಪನ್ನಗಳು
  • 17 ಕ್ಯಾನ್ಸರ್ ಔಷಧಿಗಳು
  • ಸ್ಮಾರ್ಟ್‌ಫೋನ್‌ಗಳು
  • ಇವಿ ಬ್ಯಾಟರಿಗಳು
  • ಸೌರ ಫಲಕಗಳು
  • ಮೈಕ್ರೋವೇವ್ ಓವನ್‌ಗಳು
  • ಕ್ರೀಡಾ ಉಪಕರಣಗಳು
  • ವಿಮಾನ ಇಂಧನ
  • ವಿದೇಶಿ ಪ್ರಯಾಣ (ಕೆಲವೊಂದು ವರ್ಗಗಳಲ್ಲಿ)

ದುಬಾರಿಯಾಗುವವು:

  • ಮದ್ಯ
  • ಸಿಗರೇಟ್
  • ಪಾನ್‌ ಮಸಾಲಾ ಸೇರಿದಂತೆ ತಂಬಾಕು ಉತ್ಪನ್ನಗಳು

Leave a Reply

Your email address will not be published. Required fields are marked *