MES ನವರೂ ಕನ್ನಡಿಗರೇ. ಅವರಲ್ಲಿ ಯಾರಾದರೂ ಪುಂಡಾಟಿಕೆ ಮಾಡಿದರೆ ಅದನ್ನು ಮಟ್ಟಹಾಕ್ತೀವಿ; ಸಿಎಂ

0

ಬೆಂಗಳೂರು: ಕನ್ನಡ ಹೋರಾಟಗಾರರ ಮೇಲಿನ ಕೇಸುಗಳನ್ನು ವಾಪಾಸ್ ಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ಮೈಸೂರು ಬ್ಯಾಂಕ್ ವೃತ್ತದ ನೃಪತುಂಗ ಮಂಟಪದಲ್ಲಿ ಭುವನೇಶ್ವರಿ ಹಾಗೂ ಅಣ್ಣಮ್ಮ ದೇವತೆಯ ವೈಭವದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಸಿದ್ದರಾಮಯ್ಯ, ವಾಟಾಳ್ ಕನ್ನಡದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದ ಹೋರಾಟಗಾರರು. ದೇವರಾಜ ಅರಸು ಅವರು ಮಂತ್ರಿ ಸ್ಥಾನ ಕೊಡ್ತೀನಿ ಎಂದು ಕರೆದರೂ ಕನ್ನಡ ಪಕ್ಷ ಮತ್ತು ಕನ್ನಡ ಹೋರಾಟ ಬಿಡಲು ವಾಟಾಳ್ ಅವರು ಒಪ್ಪಲಿಲ್ಲ ಎಂದು ನೆನಪಿಸಿದರು.

ನಾವೆಲ್ಲರೂ ಕನ್ನಡ ನೆಲ, ಜಲ, ಭಾಷೆ, ಸಂಸ್ಕೃತಿ ಬಗ್ಗೆ ಅಭಿಮಾನ, ಪ್ರೀತಿ ಬೆಳೆಸಿಕೊಳ್ಳಬೇಕು. ನಮ್ಮ ನೆಲದಲ್ಲಿ ಕನ್ನಡದ ವಾತಾವರಣ ಬೆಳೆಸಬೇಕು‌. ಇದಕ್ಕಾಗಿ ಯಾರು ಯಾವುದೇ ಭಾಷೆಯಲ್ಲಿ ಮಾತನಾಡಿದರೂ ನೀವು ಕನ್ನಡದಲ್ಲೇ ಉತ್ತರ ಕೊಡಬೇಕು ಎಂದು ಹೇಳಿದರು. .

ಮೈಸೂರು ವಿಶ್ವ ವಿದ್ಯಾಲಯದಿಂದ ದೇವರಾಜು ಅರಸು ಅವರಿಗೆ ಮರಣೋತ್ತರ ಡಾಕ್ಟರೇಟ್ ಪ್ರಶಸ್ತಿ ನೀಡಬೇಕು ಎನ್ನುವ ವಾಟಾಳ್ ನಾಗರಾಜ್ ಮತ್ತು ಸಾ.ರಾ.ಗೋವಿಂದು ಅವರ ಬೇಡಿಕೆಗೆ ವಿಚಾರವಾಗಿ ಸಿಂಡಿಕೇಟ್ ಸದಸ್ಯರ ಜೊತೆ ಚರ್ಚಿಸಲಾಗುವುದು. ಇಲ್ಲಿಯವರೆಗೂ ಅರಸು ಅವರಿಗೆ ಡಾಕ್ಟರೇಟ್ ಏಕೆ ಕೊಟ್ಟಿಲ್ಲ ಎಂದು ಶಾಕ್ ಆಗಿದೆ. ಈ ಬಗ್ಗೆ ಗಮನ ಹರಿಸ್ತೀನಿ ಎಂದ ಸಿಎಂ, ಮೈಸೂರು ವಿವಿಯಲ್ಲಿ ನನಗೆ ಹಿಂದೆಯೇ ಡಾಕ್ಟರೇಟ್ ಕೊಡ್ತೀವಿ ಎಂದಿದ್ದರು. ಆದರೆ ನಾನು ಪಡೆಯಲಿಲ್ಲ. ಬೇಡ ಅಂದೆ. ಓದಿ, ಜ್ಞಾನ ವಿಸ್ತಾರ ಮಾಡಿಕೊಂಡು ಡಾಕ್ಟರೇಟ್ ಪಡೆಯಬೇಕು ಎನ್ನುವುದು ನನ್ನ ವೈಯುಕ್ತಿಕ ಭಾವನೆ ಎಂದರು.

ನಾನು ವೈಯುಕ್ತಿಕವಾಗಿ ದ್ವಿಭಾಷಾ ಪರವಾಗಿ ಇದ್ದೇನೆ. ಆದರೆ ದ್ವಿಭಾಷಾ ನೀತಿಯಾಗಿ ಕಾನೂನು ಜಾರಿ ಆಗಬೇಕಾದರೆ ಕ್ಯಾಬಿನೆಟ್ ನಲ್ಲಿ ಚರ್ಚಿಸಬೇಕಾಗುತ್ತದೆ ಎಂದವರು ಹೇಳಿದರು.

MES ನವರೂ ಕನ್ನಡಿಗರೇ. ಅವರಲ್ಲಿ ಯಾರಾದರೂ ಪುಂಡಾಟಿಕೆ ಮಾಡಿದರೆ ಅದನ್ನು ಮಟ್ಟಹಾಕ್ತೀವಿ. ಗಡಿ ಭಾಗದ ಕನ್ನಡ ಶಾಲೆಗಳ ಅಭಿವೃದ್ಧಿಗೆ ಅಗತ್ಯ ಇರುವುದನ್ನೆಲ್ಲಾ ಮಾಡಲು ಸರ್ಕಾರ ಸಿದ್ದವಿದೆ ಎಂದ ಅವರು, ಬೆಳಗಾವಿ ವಿಚಾರದಲ್ಲಿ ರಾಜಿ ಇಲ್ಲ. ಮಹಾಜನ್ ವರದಿಯೇ ಅಂತಿಮ. ಬೆಳಗಾವಿ ಕನ್ನಡದ ನೆಲ, ಕರ್ನಾಟಕದ ಭಾಗ. ಇದನ್ನು ಅಲ್ಲಗಳೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

Leave a Reply

Your email address will not be published. Required fields are marked *

You may have missed