ರಾಷ್ಟ್ರ ಸೇವಿಕಾ ಸಮಿತಿಯ ಅಖಿಲ ಭಾರತೀಯ ಕಾರ್ಯಕಾರಿಣಿ ಬೈಠಕ್; ಜನಸಂಖ್ಯಾ ನೀತಿ, ಸಮಾನ ನಾಗರಿಕ ಸಂಹಿತೆ ಜಾರಿಗೆ ಆಗ್ರಹ

0
RSS-Rashtra-Sevika-Samiti-300x179-1

ಸಮಾಲ್ಖಾ (ಹರಿಯಾಣ): ರಾಷ್ಟ್ರ ಸೇವಿಕಾ ಸಮಿತಿಯ ಅಖಿಲ ಭಾರತೀಯ ಕಾರ್ಯಕಾರಿಣಿ ಹಾಗೂ ಪ್ರತಿನಿಧಿ ಮಂಡಲದ ಪ್ರಥಮ ಅರ್ಧವಾರ್ಷಿಕ ಬೈಠಕ್ ಭಾನುವಾರ ಹರಿಯಾಣದ ಸಮಾಲ್ಖಾದಲ್ಲಿ ಸಮಾರೋಪಗೊಂಡಿತು. ಜುಲೈ 24ರಿಂದ ನಡೆದ ಮೂರು ದಿನಗಳ ಸಭೆಯಲ್ಲಿ ಸಮಿತಿಯ ಪ್ರಮುಖ ಸಂಚಾಲಕಿ ಮಾ. ಶಾಂತಾಕುಮಾರಿ, ಅಖಿಲ ಭಾರತ ಪ್ರಮುಖ ಕಾರ್ಯವಾಹಿಕಾ ಮಾ. ಸೀತಾ ಗಾಯತ್ರಿ ಸೇರಿದಂತೆ 40 ಪ್ರಾಂತಗಳಿಂದ 488 ಪ್ರತಿನಿಧಿಗಳು ಭಾಗವಹಿಸಿದ್ದರು.

ಸಭೆಯಲ್ಲಿ ಫೆಬ್ರವರಿ 2026ರಿಂದ ಇದುವರೆಗೆ ನಡೆದ ಸಂಘಟನಾ ಚಟುವಟಿಕೆಗಳ ಪರಿಶೀಲನೆ ನಡೆಸಲಾಯಿತು. ಕಳೆದ ಆರು ತಿಂಗಳಲ್ಲಿ ಸಂಘಟನೆಯ ಕಾರ್ಯವ್ಯಾಪ್ತಿ ವಿಸ್ತರಿಸಿದ್ದು, ಪ್ರಸ್ತುತ 852 ಜಿಲ್ಲೆಗಳಲ್ಲಿ 4,886 ಶಾಖೆಗಳು, 1,173 ಮಿಲನಗಳು ಹಾಗೂ 1,332 ಸೇವಾ ಕಾರ್ಯಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಲಾಯಿತು.

ಸಮಿತಿಯ ಸ್ಥಾಪನೆಯ 90 ವರ್ಷಗಳ ಹಿನ್ನೆಲೆಯಲ್ಲಿ ಕಾರ್ಯವಿಸ್ತರಣೆ, ಸಾಮಾಜಿಕ ಪರಿಸ್ಥಿತಿ, ಮಹಿಳೆಯರು ಹಾಗೂ ಯುವಜನರು ಎದುರಿಸುತ್ತಿರುವ ಸವಾಲುಗಳು ಮತ್ತು ಅವುಗಳ ಪರಿಹಾರಗಳ ಕುರಿತು ಚರ್ಚೆ ನಡೆಯಿತು.

ಕೊನೆಯ ದಿನ ಜನಸಂಖ್ಯಾ ಅಸಮತೋಲನದ ಕಾರಣಗಳು ಮತ್ತು ಪರಿಣಾಮಗಳ ಕುರಿತು ನಿರ್ಣಯ ಅಂಗೀಕರಿಸಲಾಗಿದ್ದು, ದೇಶ ಹಾಗೂ ರಾಜ್ಯ ಸರ್ಕಾರಗಳು ಎಲ್ಲಾ ಸಮುದಾಯಗಳಿಗೆ ಸಮಾನ ರಾಷ್ಟ್ರೀಯ ಜನಸಂಖ್ಯಾ ನೀತಿ ಹಾಗೂ ಸಮಾನ ನಾಗರಿಕ ಸಂಹಿತೆ ಜಾರಿಗೆ ತರಬೇಕೆಂದು ಆಗ್ರಹಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮಾ. ಶಾಂತಾಕುಮಾರಿ, ಕುರುಕ್ಷೇತ್ರದ ಭೂಮಿ ಸಮಾಜಹಿತಕ್ಕಾಗಿ ದೃಢ ಸಂಕಲ್ಪದ ಸಂದೇಶ ನೀಡುತ್ತದೆ ಎಂದು ಹೇಳಿ, ಗುಣಮಟ್ಟದ ಕಾರ್ಯವಿಸ್ತರಣೆ ಹಾಗೂ ಕಾರ್ಯಕರ್ತರ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಕರೆ ನೀಡಿದರು. 90 ವರ್ಷಗಳ ಪಯಣ ಪೂರ್ಣಗೊಳಿಸಿ ಶತಮಾನದತ್ತ ಸಾಗುತ್ತಿರುವ ಸಂದರ್ಭದಲ್ಲಿ ಸಂಘಟನೆಯ ಧ್ಯೇಯ ಸಾಧನೆಗೆ ಇನ್ನಷ್ಟು ದೃಢ ಹೆಜ್ಜೆ ಇಡಬೇಕಾಗಿದೆ ಎಂದು ಅವರು ತಿಳಿಸಿದರು

Leave a Reply

Your email address will not be published. Required fields are marked *

You may have missed