2,500 ಕೋ.ರೂ.ಎಲ್ಲಿದೆ? ಖರೀದಿಸಲು ಮುಂದಾದವರು ಯಾರು? ಆರೋಪ ಬಗ್ಗೆ ED ತನಿಖೆಗೆ ಬಿಜೆಪಿ ಆಗ್ರಹ

0

ಬೆಂಗಳೂರು: 50 ಶಾಸಕರನ್ನು ಖರೀದಿಸಲು ಬೇಕಾದ 2,500 ಕೋಟಿ ರೂ. ಎಲ್ಲಿದೆ, ಯಾವ ವ್ಯಕ್ತಿ ಖರೀದಿಸಲು ಮುಂದಾಗಿದ್ದಾರೆಂದು ಸಿಎಂ ಸಿದ್ದರಾಮಯ್ಯ ತಿಳಿಸಬೇಕು. ಈ ಕುರಿತು ಜಾರಿ ನಿರ್ದೇಶನಾಲಯ ತನಿಖೆ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಕಾಲ ಸನ್ನಿಹಿತವಾಗಿದ್ದು, ಅದಕ್ಕಾಗಿ ಶಾಸಕರಿಗೆ ದರ ನಿಗದಿ ಮಾಡಿದ್ದಾರೆ. ಗುಪ್ತಚರ ವಿಭಾಗ ಅವರ ಕೈಯಲ್ಲೇ ಇದ್ದು, ಎಲ್ಲಿ ಯಾರಿಗೆ ಎಷ್ಟು ಹಣ ನೀಡಲಾಗಿದೆ ಎಂಬ ವರದಿಯನ್ನು ಅವರು ತರಿಸಿಕೊಳ್ಳಬಹುದಿತ್ತು. ತಮ್ಮ ಸ್ಥಾನ ಅಸ್ಥಿರವಾಗಿರುವುದರಿಂದ ಹೀಗೆ ಮಾತಾಡಿದ್ದಾರೆ. ಹೊಸ ಸರ್ಕಾರ ರಚನೆಯಾಗಲು 50 ಕ್ಕೂ ಅಧಿಕ ಶಾಸಕರು ಪಕ್ಷ ಬಿಟ್ಟು ಹೊರಗೆ ಬರಬೇಕಾಗುತ್ತದೆ. ಆ ಲೆಕ್ಕದಲ್ಲೂ ಅವರು ತಪ್ಪಾಗಿ ಹೇಳಿದ್ದಾರೆ ಎಂದರು.

50 ಶಾಸಕರಿಗೆ ತಲಾ 50 ಕೋಟಿ ರೂ. ಎಂದರೆ 2,500 ಕೋಟಿ ರೂ. ಬೇಕಾಗುತ್ತದೆ. ಇಷ್ಟೊಂದು ಹಣ ಯಾರ ಬಳಿ ಇದೆ? ಹರಾಜಾಗುವ ಶಾಸಕರು ಯಾರು ಎಂಬ ಪ್ರಶ್ನೆಗೆ ಉತ್ತರಿಸಲಿ. 2,500 ಕೋಟಿ ರೂ. ಬೇನಾಮಿ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಕೂಡಲೇ ವಶಕ್ಕೆ ಪಡೆಯಬೇಕು. ಖರೀದಿ ಮಾಡುವ ಆ ವ್ಯಕ್ತಿಯನ್ನು ಬಂಧಿಸಬೇಕು. ಜಾರಿ ನಿರ್ದೇಶನಾಲಯದ ಮುಖ್ಯಮಂತ್ರಿಯನ್ನು ವಿಚಾರಣೆ ಮಾಡಿ ಈ ಕುರಿತು ಮಾಹಿತಿ ಪಡೆಯಬೇಕು ಎಂದು ಆಗ್ರಹಿಸಿದರು.

ಇವರನ್ನು ಮುಟ್ಟಿದರೆ ಜನರು ದಂಗೆ ಏಳುತ್ತಾರೆ ಎನ್ನಲು ಇವರು ಮೇಲಿಂದ ಇಳಿದು ಬಂದವರಲ್ಲ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ನ್ಯಾಯಾಂಗದ ಬಗ್ಗೆ ಗೌರವವಿಲ್ಲ. ಇವರ ಪರವಾಗಿ ತೀರ್ಪು ಬಂದರೆ ನ್ಯಾಯಾಲಯ ಸರಿ ಇದೆ, ಇಲ್ಲವಾದರೆ ಸರಿ ಇಲ್ಲ ಎನ್ನುತ್ತಾರೆ. ಸಚಿವ ಜಮೀರ್‌ ಅಹ್ಮದ್‌ ಕೂಡ ಇದೇ ರೀತಿ ಮಾತಾಡಿದ್ದಾರೆ. ಕಾಂಗ್ರೆಸ್‌ ಗೆದ್ದಾಗ ಇವಿಎಂ ಸರಿ ಇದೆ, ಸೋತಾಗ ಇವಿಎಂ ಸರಿ ಇಲ್ಲ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು.

Leave a Reply

Your email address will not be published. Required fields are marked *