2027ರಲ್ಲಿ ಭಾರತದ ಮೊದಲ ಮಾನವ ಬಾಹ್ಯಾಕಾಶ ಯಾನ; ವೇಗ ಪಡೆದುಕೊಂಡ ಗಗನಯಾನ ಯೋಜನೆ

0
Isro-Gaganayan-Gaganyan-Space-1-300x182-1

ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆ ವೇಗ ಪಡೆದುಕೊಂಡಿದ್ದು, ಮೊದಲ ಸಿಬ್ಬಂದಿರಹಿತ ಪರೀಕ್ಷಾ ಮಿಷನ್‌ 2026ರ ನಾಲ್ಕನೇ ತ್ರೈಮಾಸಿಕದಲ್ಲಿ ಉಡಾವಣೆಯಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ದೇಶದ ಮೊದಲ ಮಾನವ ಬಾಹ್ಯಾಕಾಶ ಯಾನವನ್ನು 2027ರಲ್ಲಿ ನಡೆಸುವ ಗುರಿ ಹೊಂದಲಾಗಿದೆ.

ಲೋಕಸಭೆಗೆ ಲಿಖಿತ ಉತ್ತರ ನೀಡಿದ ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಮಾನವ-ರೇಟೆಡ್ ಎಲ್‌ವಿಎಂ3 ಉಡಾವಣಾ ವಾಹಕ, ಕಕ್ಷಾ ಮಾಡ್ಯೂಲ್, ಸಿಬ್ಬಂದಿ ಪಾರು ವ್ಯವಸ್ಥೆ ಸೇರಿದಂತೆ ಪ್ರಮುಖ ತಾಂತ್ರಿಕ ವ್ಯವಸ್ಥೆಗಳ ಅಭಿವೃದ್ಧಿ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ.

ಟಿವಿ-ಡಿ1 ಅಬಾರ್ಟ್ ಪರೀಕ್ಷೆ ಹಾಗೂ ಏರ್-ಡ್ರಾಪ್ ಪರೀಕ್ಷೆಗಳು ಯಶಸ್ವಿಯಾಗಿದ್ದು, ಇದೀಗ ಟಿವಿ-ಡಿ2 ಪರೀಕ್ಷಾ ಮಿಷನ್‌ಗೆ ಸಿದ್ಧತೆಗಳು ನಡೆಯುತ್ತಿವೆ ಎಂದರು.

ಮೊದಲ ಸಿಬ್ಬಂದಿರಹಿತ ಪರೀಕ್ಷಾ ಹಾರಾಟದಲ್ಲಿ ಇಸ್ರೋ ಅಭಿವೃದ್ಧಿಪಡಿಸಿರುವ ಅರ್ಧ-ಮಾನವಾಕೃತಿ ರೋಬೋಟ್ ವ್ಯೋಮಮಿತ್ರ ಸೇರಿದಂತೆ ಹಲವು ಸ್ವದೇಶಿ ತಂತ್ರಜ್ಞಾನಗಳನ್ನು ಪರೀಕ್ಷಿಸಲಾಗುತ್ತದೆ. ಮಾನವ ಬಾಹ್ಯಾಕಾಶ ಯಾನಕ್ಕೂ ಮುನ್ನ ಇನ್ನೆರಡು ಸಿಬ್ಬಂದಿರಹಿತ ಮಿಷನ್‌ಗಳನ್ನು ಕೈಗೊಳ್ಳಲಾಗುತ್ತದೆ.

2035ರ ವೇಳೆಗೆ ಭಾರತೀಯ ಬಾಹ್ಯಾಕಾಶ ನಿಲ್ದಾಣ (BAS) ಕಾರ್ಯಾರಂಭ ಮಾಡುವ ಗುರಿ ಹೊಂದಲಾಗಿದೆ. ಐದು ಮಾಡ್ಯೂಲ್‌ಗಳ ಬಾಹ್ಯಾಕಾಶ ನಿಲ್ದಾಣದ ವಿನ್ಯಾಸ ಅಂತಿಮಗೊಂಡಿದ್ದು, ಮೊದಲ ಮಾಡ್ಯೂಲ್ BAS-01 ಅಭಿವೃದ್ಧಿಗೆ ಕೇಂದ್ರ ಸಚಿವ ಸಂಪುಟ ಈಗಾಗಲೇ ಅನುಮೋದನೆ ನೀಡಿದೆ.

ಗಗನಯಾನ ಯೋಜನೆಯಡಿ ಒಟ್ಟು ಎಂಟು ಬಾಹ್ಯಾಕಾಶ ಹಾರಾಟಗಳಿಗೆ 2024ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸಚಿವ ಸಂಪುಟ ₹20,193 ಕೋಟಿ ವೆಚ್ಚಕ್ಕೆ ಅನುಮೋದನೆ ನೀಡಿತ್ತು.

ಮಿಷನ್ ಬೆಂಬಲ, ಗಗನಯಾತ್ರಿ ತರಬೇತಿ, ಸಿಬ್ಬಂದಿ ರಕ್ಷಣೆ ಹಾಗೂ ಮಾನವ ಬಾಹ್ಯಾಕಾಶ ಹಾರಾಟದ ತಂತ್ರಜ್ಞಾನಕ್ಕಾಗಿ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESA), ಆಸ್ಟ್ರೇಲಿಯನ್ ಬಾಹ್ಯಾಕಾಶ ಸಂಸ್ಥೆ (ASA), ಫ್ರಾನ್ಸ್‌ನ CNES ಹಾಗೂ ರಷ್ಯಾದ ರೋಸ್ಕೋಸ್ಮೋಸ್‌ ಜೊತೆ ಇಸ್ರೋ ಸಹಯೋಗ ಮುಂದುವರಿಸಿದೆ ಎಂದು ಸರ್ಕಾರ ತಿಳಿಸಿದೆ.

Leave a Reply

Your email address will not be published. Required fields are marked *