ಸಿ.ಟಿ.ರವಿಗೆ ಬೆದರಿಕೆ ಪತ್ರ; ಬೆದರಿಸುತ್ತಿರುವವರು ಕಾಂಗ್ರೆಸ್ ಪಕ್ಷದ ಭಾಗವೇ ಆಗಿದ್ದಾರೆ ಎಂದ ಬಿಜೆಪಿ ಸಾರಥಿ

0
by vijayendra

ಬೆಂಗಳೂರು: ಪ್ರತಿಪಕ್ಷ ಶಾಸಕರಿಗೆ ಬೆದರಿಕೆಗಳು ಎದುರರಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಳವಳ ವ್ಯಕ್ತಪಡಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರಿಗೆ ಬೆದರಿಕೆ ಪತ್ರ ರವಾನೆಯಾಗಿರುವ ಕುರಿತಂತೆ ಪ್ರತಿಕ್ರಿಯಿಸಿರುವ ವಿಜಯೇಂದ್ರ, ಬಿಜೆಪಿ ಶಾಸಕರಿಗೆ ಆತಂಕವಾಗಿ ಕಾಡುತ್ತಿರುವವರು ಕಾಂಗ್ರೆಸ್ ಪಕ್ಷದ ಭಾಗವೇ ಆಗಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ.

ಸಿ.ಟಿ.ರವಿ ಅವರಿಗೆ ರವಾನೆಯಾಗಿರುವ ಬೆದರಿಕೆ ಪತ್ರದ ಪ್ರತಿಯನ್ನು ಸಾಮಾಜಿಕ ಜಾಲತಾಣ ‘X;ನಲ್ಲಿ ಟ್ಯಾಗ್ ಮಾಡಿ ಪೋಸ್ಟ್ ಹಾಕಿರುವ ಬಿ.ವೈ.ವಿಜಯೇಂದ್ರ, ಬೆಳಗಾವಿಯ ಸುವರ್ಣ ಸೌಧದಲ್ಲಿ ನಮ್ಮ ಪಕ್ಷದ ಪ್ರಮುಖರಾದ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ ಅವರ ಮೇಲೆ ಪ್ರಜಾಪ್ರಭುತ್ವವನ್ನು ನಾಚಿಸುವ ರೀತಿಯಲ್ಲಿ ದೌರ್ಜನ್ಯ ಹಾಗೂ ಹಲ್ಲೆಗೆ ಯತ್ನ ನಡೆಯಿತು. ಅದರ ನಂತರವೂ ಅವರ ವಿರುದ್ಧ ನಿರಂತರ ಬೆದರಿಕೆ ಒಡ್ಡಲಾಗುತ್ತಿದೆ. ಅದರ ಮುಂದುವರಿದ ಭಾಗವಾಗಿ ನಿನ್ನೆ ಅವರಿಗೆ ಬೆದರಿಕೆ ಪತ್ರ ರವಾನೆಯಾಗಿರುವುದು ಅತ್ಯಂತ ಆತಂಕಕಾರಿ ವಿಷಯವಾಗಿದೆ ಎಂದಿದ್ದಾರೆ.

ಸಿ.ಟಿ.ರವಿ ಅವರನ್ನು ಗುರಿಯನ್ನಾಗಿಸಿಕೊಂಡಿರುವ ದುಷ್ಕರ್ಮಿಗಳು ಅವರ ವಿರುದ್ಧ ವ್ಯೂಹ ರಚಿಸಿರುವ ಸಾಧ್ಯತೆಯನ್ನು ಅವರಿಗೆ ಬಂದಿರುವ ಬೆದರಿಕೆಯ ಸಂದೇಶಗಳ ಹಿನ್ನೆಲೆಯಲ್ಲಿ ತಳ್ಳಿ ಹಾಕಲಾಗದು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರದಿಂದ ಅವರಿಗೆ ರಕ್ಷಣೆ ಸಿಗುತ್ತದೆ ಎಂದು ನಿರೀಕ್ಷಿಸುವುದು “ಮಾರ್ಜಾಲ ನ್ಯಾಯದಂತಾಗುತ್ತದೆ” ಎಂದು ವಿಜಯೇಂದ್ರ ಹೇಳಿದ್ದಾರೆ.

ಸಿ.ಟಿ.ರವಿ ಅವರಿಗೆ ಬೆದರಿಕೆ ಒಡ್ಡಲಾಗುತ್ತಿರುವ ಶಕ್ತಿಗಳು ಯಾವುದು ಎಂಬುದು ಸರ್ಕಾರ ಹಾಗೂ ಪೊಲೀಸರಿಗೆ ತಿಳಿದೇ ಇದೆ, ಇಷ್ಟಾಗಿಯೂ ದುಷ್ಕ ಶಕ್ತಿಗಳ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಏಕೆಂದರೆ ಅವರು ಕಾಂಗ್ರೆಸ್ ಪಕ್ಷದ ಭಾಗವೇ ಆಗಿದ್ದಾರೆ ಎಂಬುದು ಬಹಿರಂಗ ಸತ್ಯ. ಈ ನಿಟ್ಟಿನಲ್ಲಿ ಸಿಟಿ ರವಿ ಅವರ ರಕ್ಷಣೆಗೆ ವಿಶೇಷ ಭದ್ರತೆ ಒದಗಿಸಬೇಕೆಂದು ವಿಜಯೇಂದ್ರ ಒತ್ತಾಯಿಸಿದ್ದಾರೆ. ಶಾಸಕ ಸಿಟಿ ರವಿ ಅವರು ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಇಂತಹ ಬೆದರಿಕೆ, ದೌರ್ಜನ್ಯಗಳು ಮುಂದುವರೆದಲ್ಲಿ ಅದನ್ನು ಸವಾಲಾಗಿ ಸ್ವೀಕರಿಸಿ ಬಿಜೆಪಿ ಹೋರಾಡಲಿದೆ ಎಂದು ಅವರು ಕಾಂಗ್ರೆಸ್ ಸರ್ಕಾರವನ್ನು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

You may have missed