ಸಿಜೆಪಿ ಪ್ರತಿಭಟನೆ ಕುರಿತು ಅಪಪ್ರಚಾರ: 400ಕ್ಕೂ ಹೆಚ್ಚು ಪಾಕ್‌ ಮೂಲದ ಖಾತೆ ಬ್ಲಾಕ್

0
apple-iphone-mobile-cel-1-300x172-1

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ (CJP) ಪ್ರತಿಭಟನೆ ಕುರಿತು ಎಐ (AI) ತಂತ್ರಜ್ಞಾನ ಬಳಸಿ ಸುಳ್ಳು ಮಾಹಿತಿ ಹರಡಲು ಸಂಘಟಿತ ಅಪಪ್ರಚಾರ ನಡೆಸಲಾಗಿದೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮೂಲದ 400ಕ್ಕೂ ಹೆಚ್ಚು ಸಾಮಾಜಿಕ ಜಾಲತಾಣ ಖಾತೆಗಳನ್ನು ಗುರುತಿಸಿ ಬ್ಲಾಕ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸರು, ಪ್ರತಿಭಟನೆಗೆ ಸಂಬಂಧಿಸಿದಂತೆ ಎಐ ನಿರ್ಮಿತ ವಿಡಿಯೋಗಳು, ಡೀಪ್‌ಫೇಕ್‌ಗಳು, ಸಂಪಾದಿತ ಚಿತ್ರಗಳು ಹಾಗೂ ನಕಲಿ ಸಾಮಾಜಿಕ ಜಾಲತಾಣ ಪೋಸ್ಟ್‌ಗಳ ಮೂಲಕ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದ್ದಾರೆ.

ಪ್ರತಿಭಟನೆ ಕುರಿತ ಪೋಸ್ಟ್‌ಗಳು, ವಿಡಿಯೋಗಳು ಅಥವಾ ಛಾಯಾಚಿತ್ರಗಳನ್ನು ನಂಬುವ ಅಥವಾ ಹಂಚಿಕೊಳ್ಳುವ ಮೊದಲು ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

ಕಳೆದ ಕೆಲವು ವಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ, ವಿಶೇಷವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ, ಪ್ರತಿಭಟನೆಗೆ ಸಂಬಂಧಿಸಿದ ಅನೇಕ ಪೋಸ್ಟ್‌ಗಳು ವೈರಲ್ ಆಗಿದ್ದು, ಅವುಗಳಲ್ಲಿ ಹಲವು ತಪ್ಪು ಮಾಹಿತಿ ಅಥವಾ ದಾರಿ ತಪ್ಪಿಸುವ ಉದ್ದೇಶ ಹೊಂದಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರ ವಿರುದ್ಧ ಕೇಂದ್ರ ಸರ್ಕಾರ ದೊಡ್ಡ ಮಟ್ಟದ ದಮನ ಕಾರ್ಯಾಚರಣೆ ನಡೆಸಲಿದೆ ಎಂಬ ಸಾಮಾಜಿಕ ಜಾಲತಾಣದ ಪೋಸ್ಟ್‌ವನ್ನೂ ಪೊಲೀಸರು ಸುಳ್ಳು ಎಂದು ಸ್ಪಷ್ಟಪಡಿಸಿದ್ದು, ಅಂತಹ ಯಾವುದೇ ಕ್ರಮದ ಪ್ರಸ್ತಾವನೆ ಇಲ್ಲ ಎಂದು ತಿಳಿಸಿದ್ದಾರೆ.

ತನಿಖೆಯಲ್ಲಿ ಪಾಕಿಸ್ತಾನ ಮೂಲದ ಹಲವು ಖಾತೆಗಳು ನಕಲಿ ಮಾಹಿತಿ ಹರಡುವಲ್ಲಿ ತೊಡಗಿದ್ದವು ಎಂಬುದು ಬೆಳಕಿಗೆ ಬಂದಿದ್ದು, ಅಂತಹ 400ಕ್ಕೂ ಹೆಚ್ಚು ಖಾತೆಗಳನ್ನು ನಿರ್ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಖಾತೆಗಳು ಈ ಹಿಂದೆ ಆಪರೇಷನ್ ಸಿಂಧೂರ್ ಸಂದರ್ಭದಲ್ಲಿಯೂ ನಕಲಿ ಸುದ್ದಿಗಳನ್ನು ಹರಡಿದ್ದವು ಎಂದು ಆರೋಪಿಸಲಾಗಿದೆ.

ಇದರ ಜೊತೆಗೆ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮಗಳ ತನಿಖೆಗಾಗಿ ಅಪರಾಧ ಶಾಖೆಯಡಿ ವಿಶೇಷ ಕಾರ್ಯಪಡೆ (STF) ರಚಿಸಲಾಗಿದ್ದು, ಉಪ ಪೊಲೀಸ್ ಆಯುಕ್ತ (DCP) ಹುದ್ದೆಯ ಅಧಿಕಾರಿಯ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed