ಸಹಕಾರಿ ವಲಯದಲ್ಲಿ ಎನ್‌ಸಿಡಿಸಿ ಪಾತ್ರ ವಿಸ್ತರಣೆಗೆ 25 ವರ್ಷಗಳ ಮಾರ್ಗಸೂಚಿ ರೂಪಿಸಿ: ಅಮಿತ್ ಶಾ ಕರೆ

0
Amith-Shah

ಸಣ್ಣ ರೈತರು, ಪಶುಪಾಲಕರು, ಮೀನುಗಾರರು ಮತ್ತು ಗ್ರಾಮೀಣ ಮಹಿಳೆಯರಿಗೆ ಹೆಚ್ಚಿನ ಪ್ರಯೋಜನ ತಲುಪಿಸಲು ಒತ್ತು; 2030ರ ವೇಳೆಗೆ ಈಶಾನ್ಯ ಭಾರತವನ್ನು ಸಹಕಾರ ಸಂಘಗಳ ಮೂಲಕ ಸ್ವಾವಲಂಬಿಯಾಗಿಸುವ ಗುರಿ

ನವದೆಹಲಿ: ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದ (NCDC) ಕಾರ್ಯವ್ಯಾಪ್ತಿ ಮತ್ತು ಕಾರ್ಯನಿರ್ವಹಣೆಯನ್ನು ಮುಂದಿನ 25 ವರ್ಷಗಳಲ್ಲಿ ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಸಮಗ್ರ ಮಾರ್ಗಸೂಚಿ ಸಿದ್ಧಪಡಿಸುವಂತೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಕರೆ ನೀಡಿದ್ದಾರೆ.

ನವದೆಹಲಿಯಲ್ಲಿ ಶುಕ್ರವಾರ ನಡೆದ ಎನ್‌ಸಿಡಿಸಿಯ ಸಾಮಾನ್ಯ ಮಂಡಳಿಯ 93ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿಗಮ ತನ್ನ ಅಸ್ತಿತ್ವ ಹೊಂದಿರುವುದು ಮಹತ್ವದ ಸಾಧನೆ ಎಂದು ಬಣ್ಣಿಸಿದರು. ಇದರ ಪ್ರಯೋಜನಗಳು ಸಣ್ಣ ರೈತರು, ಪಶುಪಾಲಕರು, ಮೀನುಗಾರರು ಹಾಗೂ ಗ್ರಾಮೀಣ ಮಹಿಳೆಯರಿಗೆ ತಲುಪುತ್ತಿವೆ ಎಂದು ಹೇಳಿದರು.

ಸಹಕಾರಿ ವಲಯಕ್ಕೆ ಆರ್ಥಿಕ ಮತ್ತು ಸಾಂಸ್ಥಿಕ ಬೆಂಬಲ ಒದಗಿಸುವುದರ ಜತೆಗೆ ಗ್ರಾಮೀಣ ಸಮುದಾಯಗಳಲ್ಲಿ ತನ್ನ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುವ ಮೂಲಕ ಎನ್‌ಸಿಡಿಸಿ ಪಾತ್ರವನ್ನು ಬಲಪಡಿಸಬೇಕಿದೆ ಎಂದು ಅವರು ಒತ್ತಿ ಹೇಳಿದರು.

2030ರ ವೇಳೆಗೆ ಸಹಕಾರ ಸಂಘಗಳ ನೆರವಿನಿಂದ ಈಶಾನ್ಯ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಎನ್‌ಸಿಡಿಸಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು. ಸಹಕಾರಿ ಸಕ್ಕರೆ ಕಾರ್ಖಾನೆಗಳ ಲಾಭದಾಯಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವೃತ್ತಾಕಾರದ ಆರ್ಥಿಕತೆಯ (ಸರ್ಕ್ಯುಲರ್ ಎಕಾನಮಿ) ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅಗತ್ಯವನ್ನೂ ಅವರು ಪ್ರಸ್ತಾಪಿಸಿದರು.

ಮುಂದಿನ 25 ವರ್ಷಗಳ ದೀರ್ಘಕಾಲೀನ ಕಾರ್ಯತಂತ್ರವು ನಿಗಮದ ಚಟುವಟಿಕೆಗಳನ್ನು ವಿಸ್ತರಿಸಲು ನೆರವಾಗಲಿದೆ. ಜತೆಗೆ ದೇಶಾದ್ಯಂತ ಸಹಕಾರಿ ಚಳವಳಿಯ ಬೆಳವಣಿಗೆಗೆ ಹೆಚ್ಚು ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಸಾಧ್ಯವಾಗಲಿದೆ ಎಂದು ಸಚಿವರು ಹೇಳಿದರು.

Leave a Reply

Your email address will not be published. Required fields are marked *

You may have missed