ವ್ಯಾಪಾರ ಅಡೆತಡೆ ಕಡಿತ, ನವೋದ್ಯಮ ವಿಸ್ತರಣೆಗೆ ‘ಬ್ರಿಕ್ಸ್’ ಕ್ರಿಯಾ ಯೋಜನೆ ಅಗತ್ಯ: ಪ್ರಧಾನಿ ಮೋದಿ

ನವದೆಹಲಿ: ಬ್ರಿಕ್ಸ್ ರಾಷ್ಟ್ರಗಳ ನಡುವಿನ ಆರ್ಥಿಕ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ವ್ಯಾಪಾರ ಅಡೆತಡೆಗಳನ್ನು ಕಡಿಮೆ ಮಾಡುವುದು, ನವೋದ್ಯಮಗಳಿಗೆ ಹೊಸ ಮಾರುಕಟ್ಟೆ ಒದಗಿಸುವುದು ಹಾಗೂ ವ್ಯಾಪಾರ ಪಾಲುದಾರಿಕೆಗಳನ್ನು ಹೆಚ್ಚಿಸುವ ಉದ್ದೇಶದಿಂದ ಅಳೆಯಬಹುದಾದ ಗುರಿಗಳೊಂದಿಗೆ ಕ್ರಿಯಾ ಯೋಜನೆ ರೂಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಬ್ರಿಕ್ಸ್ ವ್ಯವಹಾರ ವೇದಿಕೆ-2026 ಅನ್ನು ಉದ್ದೇಶಿಸಿ ಮಾತನಾಡಿದ ಅವರು, 2006ರಲ್ಲಿ ಆರಂಭವಾದ ಬ್ರಿಕ್ಸ್ ಇಂದು ಪಾಲುದಾರ ರಾಷ್ಟ್ರಗಳು ಸೇರಿದಂತೆ 21 ದೇಶಗಳನ್ನು ಒಳಗೊಂಡಿದೆ. ಇದು ಜಾಗತಿಕ ಜನಸಂಖ್ಯೆಯ ಸುಮಾರು ಶೇ.50, ಜಾಗತಿಕ ಜಿಡಿಪಿಯ ಶೇ.40 ಹಾಗೂ ವಿಶ್ವ ವ್ಯಾಪಾರದ ಶೇ.25ಕ್ಕೂ ಹೆಚ್ಚಿನ ಪಾಲನ್ನು ಪ್ರತಿನಿಧಿಸುತ್ತದೆ ಎಂದರು.
ಕಳೆದ ಎರಡು ದಶಕಗಳಲ್ಲಿ ಬ್ರಿಕ್ಸ್ ರಾಷ್ಟ್ರಗಳ ಒಟ್ಟು ಜಿಡಿಪಿ ಸುಮಾರು 4.5 ಪಟ್ಟು ವೃದ್ಧಿಯಾಗಿದೆ. ಇದೇ ಅವಧಿಯಲ್ಲಿ ಜಾಗತಿಕ ಜಿಡಿಪಿ ಸುಮಾರು 2.5 ಪಟ್ಟು ಹೆಚ್ಚಾಗಿದೆ ಎಂದು ಮೋದಿ ಹೇಳಿದರು.
ಭಾರತದ ಬ್ರಿಕ್ಸ್ ಅಧ್ಯಕ್ಷತೆಯ ಧ್ಯೇಯವಾಕ್ಯವಾದ ‘ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ’ವನ್ನು ಉಲ್ಲೇಖಿಸಿದ ಅವರು, ಭಾರತ ಸರಬರಾಜು ಸರಪಳಿ ಬಲಪಡಿಸುವುದು ಹಾಗೂ ಮೂಲಸೌಕರ್ಯ ವಿಸ್ತರಣೆಗೆ ಆದ್ಯತೆ ನೀಡುತ್ತಿದೆ ಎಂದರು.

ಹಡಗು ನಿರ್ಮಾಣ, ಅರೆವಾಹಕ, ಕ್ವಾಂಟಂ ತಂತ್ರಜ್ಞಾನ, ನಿರ್ಣಾಯಕ ಖನಿಜಗಳು ಮತ್ತು ಜೈವಿಕ ತಂತ್ರಜ್ಞಾನ ಸೇರಿದಂತೆ ಕಾರ್ಯತಂತ್ರದ ಕ್ಷೇತ್ರಗಳಲ್ಲಿ ಸಾಮರ್ಥ್ಯ ವೃದ್ಧಿಸಲಾಗುತ್ತಿದೆ ಎಂದು ತಿಳಿಸಿದರು.
ವ್ಯವಹಾರಗಳು ‘ಮೇಕ್ ಇನ್ ಇಂಡಿಯಾ, ಇನ್ನೋವೇಟ್ ವಿತ್ ಇಂಡಿಯಾ, ಸ್ಕೇಲ್ ಫಾರ್ ದಿ ವರ್ಲ್ಡ್’ ಎಂಬ ದೃಷ್ಟಿಕೋನ ಅಳವಡಿಸಿಕೊಳ್ಳಬೇಕು ಎಂದು ಪ್ರಧಾನಿ ಕರೆ ನೀಡಿದರು.
ಭಾರತದ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯ ಬೆಳವಣಿಗೆಯನ್ನು ಉಲ್ಲೇಖಿಸಿದ ಅವರು, ದೇಶದಲ್ಲಿ ಈಗ 2 ಲಕ್ಷಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಹಾಗೂ 120ಕ್ಕೂ ಅಧಿಕ ಯುನಿಕಾರ್ನ್‌ಗಳಿವೆ ಎಂದರು.
ಕೃತಕ ಬುದ್ಧಿಮತ್ತೆ, ಹಸಿರು ಹೈಡ್ರೋಜನ್, ಬ್ಯಾಟರಿ, ರಕ್ಷಣಾ ಕ್ಷೇತ್ರ ಮತ್ತು ಬಾಹ್ಯಾಕಾಶ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ನವೋದ್ಯಮಗಳನ್ನು ಜಾಗತಿಕ ಮಾರುಕಟ್ಟೆಗೆ ಕೊಂಡೊಯ್ಯಲು ಬ್ರಿಕ್ಸ್ ವೇದಿಕೆ ನೆರವಾಗಬೇಕು ಎಂದರು.
ಬ್ರಿಕ್ಸ್ ವ್ಯವಹಾರ ಮಂಡಳಿಗೆ ಮೂರು ಪ್ರಮುಖ ಗುರಿಗಳನ್ನು ಪ್ರಧಾನಿ ಸೂಚಿಸಿದರು. ಬ್ರಿಕ್ಸ್ ರಾಷ್ಟ್ರಗಳ ನಡುವಿನ ಪ್ರಮುಖ 10 ವ್ಯಾಪಾರ ಅಡೆತಡೆಗಳ ಕುರಿತು ವರದಿ ಸಿದ್ಧಪಡಿಸುವುದು, ಪ್ರತಿ ವರ್ಷ ಕನಿಷ್ಠ 100 ಬ್ರಿಕ್ಸ್ ನವೋದ್ಯಮಗಳಿಗೆ ಇತರ ಸದಸ್ಯ ರಾಷ್ಟ್ರಗಳ ಮಾರುಕಟ್ಟೆ ಪ್ರವೇಶಕ್ಕೆ ನೆರವು ನೀಡುವುದು ಹಾಗೂ 1,000 ಹೊಸ ವ್ಯಾಪಾರ ಪಾಲುದಾರಿಕೆಗಳನ್ನು ನಿರ್ಮಿಸುವುದು ಇದರಲ್ಲಿ ಸೇರಿವೆ.
ಕೃಷಿ, ಆರೋಗ್ಯ, ಕೌಶಲ್ಯಾಭಿವೃದ್ಧಿ ಹಾಗೂ ಸ್ಮಾರ್ಟ್ ಗ್ರಿಡ್ ಕ್ಷೇತ್ರಗಳ ಸಹಕಾರಕ್ಕೂ ಒತ್ತು ನೀಡಿದ ಮೋದಿ, ಬ್ರಿಕ್ಸ್ ಇನ್‌ಕ್ಯುಬೇಟರ್ ನೆಟ್‌ವರ್ಕ್, ಎಂಎಸ್‌ಎಂಇ ಪೋರ್ಟಲ್ ಹಾಗೂ ಸ್ಟಾರ್ಟ್‌ಅಪ್ ಇನ್ನೋವೇಶನ್ ಫಂಡ್‌ನಂತಹ ಉಪಕ್ರಮಗಳನ್ನು ಉಲ್ಲೇಖಿಸಿದರು.
ಭಾರತದ ಯುಪಿಐ ವ್ಯವಸ್ಥೆ ಜನಸಂಖ್ಯೆಯ ಪ್ರಮಾಣದಲ್ಲಿ ಆರ್ಥಿಕ ಸೇರ್ಪಡೆಗೆ ನೆರವಾಗುತ್ತಿದೆ. ಜಾಗತಿಕ ನೈಜ-ಸಮಯದ ಪಾವತಿಗಳಲ್ಲಿ ಸುಮಾರು ಅರ್ಧದಷ್ಟು ಭಾರತದಲ್ಲೇ ನಡೆಯುತ್ತಿವೆ ಎಂದು ಹೇಳಿದರು.
ಸುರಕ್ಷಿತ ಸಮುದ್ರ ಮಾರ್ಗ, ನೌಕಾಯಾನದ ಸ್ವಾತಂತ್ರ್ಯ ಹಾಗೂ ನಾವಿಕರ ಸುರಕ್ಷತೆಗೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ ಅವರು, ಮಹಿಳಾ ಉದ್ಯಮಿಗಳ ಪಾತ್ರವನ್ನೂ ಶ್ಲಾಘಿಸಿದರು. ಭಾರತದಲ್ಲಿ ನಡೆದ ಬ್ರಿಕ್ಸ್ ಮಹಿಳಾ ಉದ್ಯಮ ಒಕ್ಕೂಟದ ಸಭೆಯಲ್ಲಿ ಸುಮಾರು 200 ಮಹಿಳಾ ಉದ್ಯಮ ನಾಯಕಿಯರು ಭಾಗವಹಿಸಿದ್ದನ್ನು ಅವರು ಉಲ್ಲೇಖಿಸಿದರು.
