ರಾಜ್ಯದಲ್ಲಿ ಮುಂಗಾರು ಅಬ್ಬರ: ಪ್ರವಾಹ, ಭೂಕುಸಿತಕ್ಕೆ ಮೂವರು ಬಲಿ; ರೈಲು ಸಂಚಾರ ಅಸ್ತವ್ಯಸ್ತ

0
Mangalore-Rain-300x164-1

ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆ ಮತ್ತೆ ಅಬ್ಬರಿಸಿದ್ದು, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಪ್ರವಾಹ, ಭೂಕುಸಿತ ಮತ್ತು ಮರಗಳು ಉರುಳಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಹಾನಿ ಸಂಭವಿಸಿದ್ದು, ತೀರ್ಥಹಳ್ಳಿಯಲ್ಲಿ ಗುಡ್ಡ ಕುಸಿದು ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಜೊತೆಗೆ ಎಎಂಆರ್ ಜಲಾಶಯದಿಂದ ನೀರು ಬಿಡುಗಡೆ ಮಾಡಿರುವ ಪರಿಣಾಮ ಬಂಟ್ವಾಳ ತಾಲೂಕಿನ ಅಲಡ್ಕ, ಬೊಗೊಡಿ, ನಂದಾವರ, ಗುಡಿನಬಳಿ, ಕಂಚಿಕಾರಪೇಟೆ ಸೇರಿದಂತೆ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ನೇತ್ರಾವತಿ ನದಿಯ ನೀರಿನ ಮಟ್ಟ ದಾಖಲೆ ಪ್ರಮಾಣಕ್ಕೆ ಏರಿಕೆಯಾಗಿದ್ದು, ನದಿ ಪಾತ್ರದ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಪರಿಸ್ಥಿತಿ ನಿಭಾಯಿಸಲು ಎನ್‌ಡಿಆರ್‌ಎಫ್ ತಂಡವನ್ನು ಬೆಳ್ತಂಗಡಿಗೆ ನಿಯೋಜಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬರುವೆ ಗ್ರಾಮದಲ್ಲಿ ಬೃಹತ್ ಮರವೊಂದು ಚಲಿಸುತ್ತಿದ್ದ ಸರಕು ವಾಹನದ ಮೇಲೆ ಉರುಳಿಬಿದ್ದಿದ್ದು, ಚಾಲಕ ತೌಸಿಫ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ವೇಳೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಗುಡ್ಡ ಕುಸಿದು ಮಲ್ಲಿಕಾರ್ಜುನ (35), ನಾಗವೇಣಿ (28) ಮತ್ತು ಅವರ ಮೂರು ವರ್ಷದ ಪುತ್ರ ಸಂತೋಷ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮತ್ತಿಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಡಗು ಜಿಲ್ಲೆಯ ಭಾಗಮಂಡಲ ಸಂಪೂರ್ಣ ಜಲಾವೃತಗೊಂಡಿದ್ದು, ತ್ರಿವೇಣಿ ಸಂಗಮ, ಸ್ನಾನಘಟ್ಟ ಹಾಗೂ ಉದ್ಯಾನವನಗಳು ನೀರಿನಲ್ಲಿ ಮುಳುಗಿವೆ. ಭಾಗಮಂಡಲ–ತಲಕಾವೇರಿ ರಸ್ತೆ ಜಲಾವೃತಗೊಂಡಿರುವುದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ.

ಕಬಿನಿ ಜಲಾಶಯದಿಂದ 25 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಿರುವುದರಿಂದ ಪ್ರವಾಹದ ಭೀತಿ ಮತ್ತಷ್ಟು ಹೆಚ್ಚಾಗಿದೆ.

ಇನ್ನೊಂದೆಡೆ, ಯಡಕುಮಾರಿ–ಶ್ರೀವಾಗಿಲು ರೈಲು ನಿಲ್ದಾಣಗಳ ನಡುವೆ ಭೂಕುಸಿತ ಸಂಭವಿಸಿರುವುದರಿಂದ ಕರಾವಳಿ–ಬೆಂಗಳೂರು ಮಾರ್ಗದ ಹಲವು ರೈಲುಗಳ ಸಂಚಾರ ರದ್ದು ಅಥವಾ ಭಾಗಶಃ ರದ್ದುಗೊಂಡಿದೆ. ಮುರುಡೇಶ್ವರ, ಕಾರವಾರ, ಕೋಝಿಕ್ಕೋಡ್, ಮಂಗಳೂರು ಹಾಗೂ ವಿಜಯಪುರ ಸಂಪರ್ಕಿಸುವ ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ರೈಲು ಹಳಿ ದುರಸ್ತಿ ಕಾರ್ಯ ನಡೆಯುತ್ತಿದ್ದು, ಪರಿಸ್ಥಿತಿ ಸಹಜವಾಗಲು ಇನ್ನೂ ಸಮಯ ಬೇಕಾಗಬಹುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *