ಯೋಗೀಶ್ ಗೌಡ ಹತ್ಯೆ ಪ್ರಕರಣ: ವಿನಯ್ ಕುಲಕರ್ಣಿಗೆ ಹೈಕೋರ್ಟ್ ಜಾಮೀನು, ಜೀವಾವಧಿ ಶಿಕ್ಷೆಗೆ ತಾತ್ಕಾಲಿಕ ತಡೆ

0
High-Court-of-Karnataka-300x167-1

ಬೆಂಗಳೂರು: ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಮಧ್ಯಂತರ ಪರಿಹಾರ ನೀಡಿದೆ. ವಿಶೇಷ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆ ಮತ್ತು ದೋಷಾರೋಪಣೆಯ ಆದೇಶದ ಜಾರಿಗೆ ತಾತ್ಕಾಲಿಕ ತಡೆ ನೀಡಿ ಜಾಮೀನು ಮಂಜೂರು ಮಾಡಿದೆ.

ನ್ಯಾಯಮೂರ್ತಿಗಳಾದ ಬಸವರಾಜ್ ಹಾಗೂ ಮೊಹಮ್ಮದ್ ನವಾಜ್ ಅವರ ವಿಭಾಗೀಯ ಪೀಠ, ವಿನಯ್ ಕುಲಕರ್ಣಿ ಸೇರಿದಂತೆ 10 ಆರೋಪಿಗಳಿಗೆ ಜಾಮೀನು ನೀಡಿದೆ. ಚನ್ನಕೇಶವ ಟಿಂಗರಿಕರ್ ಅವರಿಗೂ ಜಾಮೀನು ದೊರೆತಿದೆ.

ಹೈಕೋರ್ಟ್ ಐದು ಲಕ್ಷ ರೂ. ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಇಬ್ಬರ ಶ್ಯೂರಿಟಿ ಸಲ್ಲಿಸುವಂತೆ ಷರತ್ತು ವಿಧಿಸಿದೆ. ಅಲ್ಲದೆ, ನ್ಯಾಯಾಲಯದ ಅನುಮತಿ ಇಲ್ಲದೆ ಭಾರತದಿಂದ ಹೊರಗೆ ಪ್ರಯಾಣಿಸದಂತೆ ಸೂಚಿಸಿದೆ. ವಿನಯ್ ಕುಲಕರ್ಣಿಗೆ ಧಾರವಾಡ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ವಿಧಿಸುವಂತೆ ಸಲ್ಲಿಸಲಾಗಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

2016ರ ಜೂನ್‌ನಲ್ಲಿ ಧಾರವಾಡದಲ್ಲಿ ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಕಳೆದ ಏಪ್ರಿಲ್‌ನಲ್ಲಿ ಬೆಂಗಳೂರಿನ ವಿಶೇಷ ನ್ಯಾಯಾಲಯವು ವಿನಯ್ ಕುಲಕರ್ಣಿ ಸೇರಿದಂತೆ 17 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದರಿಂದ ಅವರು ಶಾಸಕ ಸ್ಥಾನದಿಂದ ಅನರ್ಹರಾಗಿದ್ದರು.

ಇದೀಗ ಹೈಕೋರ್ಟ್ ಶಿಕ್ಷೆಯ ಜಾರಿಗೆ ತಾತ್ಕಾಲಿಕ ತಡೆ ನೀಡಿ ಜಾಮೀನು ಮಂಜೂರು ಮಾಡಿರುವುದರಿಂದ, ಮೇಲ್ಮನವಿ ಅರ್ಜಿಯ ವಿಚಾರಣೆ ಪೂರ್ಣಗೊಳ್ಳುವವರೆಗೆ ವಿನಯ್ ಕುಲಕರ್ಣಿಗೆ ಮಧ್ಯಂತರ ಕಾನೂನು ಪರಿಹಾರ ದೊರೆತಿದೆ.

Leave a Reply

Your email address will not be published. Required fields are marked *