ಯಮುನಾ ನದಿಯಲ್ಲಿ ದೆಹಲಿಯ ಮೊದಲ ಕ್ರೂಸ್ ಸೇವೆ ಆರಂಭ

0
Delhi-River-Tourism

ನವದೆಹಲಿ: ಯಮುನಾ ನದಿಯಲ್ಲಿ ದೆಹಲಿಯ ಮೊದಲ ಮನರಂಜನಾ ಕ್ರೂಸ್ ಸೇವೆ ಆರಂಭವಾಗಿದೆ. ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್ ಅವರು ಮಂಗಳವಾರ ಸೋನಿಯಾ ವಿಹಾರ್‌ನಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಉಪಸ್ಥಿತಿಯಲ್ಲಿ ಯೋಜನೆಗೆ ಚಾಲನೆ ನೀಡಿದರು.

ಸೋನಿಯಾ ವಿಹಾರ್‌ನಿಂದ ಜಗತ್‌ಪುರದವರೆಗೆ ಕ್ರೂಸ್ ಸೇವೆ ಕಾರ್ಯನಿರ್ವಹಿಸಲಿದ್ದು, 30 ಆಸನಗಳ ವಿದ್ಯುತ್ ಚಾಲಿತ ಹಡಗು ಸುಮಾರು ಆರು ಕಿ.ಮೀ. ಸುತ್ತಿನ ಪ್ರಯಾಣವನ್ನು ಒದಗಿಸಲಿದೆ. ಸುಸ್ಥಿರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರ ಜತೆಗೆ, ಯಮುನಾವನ್ನು ಹೊಸ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವುದು ಯೋಜನೆಯ ಉದ್ದೇಶವಾಗಿದೆ.

ಈ ಯೋಜನೆಯು ದೆಹಲಿಯ ನದಿ ಪ್ರವಾಸೋದ್ಯಮದಲ್ಲಿ ಹೊಸ ಅಧ್ಯಾಯ ಆರಂಭಿಸಲಿದೆ. ಒಳನಾಡಿನ ಜಲಮಾರ್ಗಗಳನ್ನು ಪ್ರವಾಸೋದ್ಯಮ, ಸಂಪರ್ಕ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಕೇಂದ್ರದ ಪ್ರಯತ್ನದ ಭಾಗವಾಗಿದೆ ಎಂದು ಸೋನೋವಾಲ್ ತಿಳಿಸಿದರು.

ಯಮುನಾ ನದಿಯೊಂದಿಗೆ ಜನರ ಸಂಬಂಧವನ್ನು ಮತ್ತಷ್ಟು ಬಲಪಡಿಸುವುದರ ಜತೆಗೆ ದೆಹಲಿಯ ಪ್ರವಾಸಿ ಆಕರ್ಷಣೆಗಳನ್ನು ಹೆಚ್ಚಿಸಲಿದೆ ಎಂದು ಮುಖ್ಯಮಂತ್ರಿ ರೇಖಾ ಗುಪ್ತಾ ಹೇಳಿದರು.

ಯೋಜನೆಯಲ್ಲಿ ಯಮುನೆಯ ಪುರಾಣ ಮತ್ತು ಪರಂಪರೆಯನ್ನು ಬಿಂಬಿಸುವ ಬೆಳಕು ಮತ್ತು ಧ್ವನಿ ಪ್ರದರ್ಶನದ ಸಂಗೀತ ಕಾರಂಜಿ, ಆಹಾರ ಮಳಿಗೆಗಳು, ಶಾಪಿಂಗ್ ಪ್ರದೇಶ, ಮಕ್ಕಳ ಆಟದ ವಲಯ ಹಾಗೂ ಸಾಹಸ ಕ್ರೀಡಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ತೇಲುವ ಜೆಟ್ಟಿಗಳು, ಟಿಕೆಟ್ ಕೌಂಟರ್‌ಗಳು ಮತ್ತು ಆನ್‌ಲೈನ್ ಬುಕಿಂಗ್ ವ್ಯವಸ್ಥೆಯನ್ನೂ ಒದಗಿಸಲಾಗಿದೆ.

ಭಾರತೀಯ ಒಳನಾಡು ಜಲಮಾರ್ಗ ಪ್ರಾಧಿಕಾರವು ದೆಹಲಿ ಸರ್ಕಾರಿ ಸಂಸ್ಥೆಗಳು ಮತ್ತು ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಯೋಜನೆಯನ್ನು ಅಭಿವೃದ್ಧಿಪಡಿಸಿದೆ. ರಾಷ್ಟ್ರೀಯ ಜಲಮಾರ್ಗ ಕಾಯ್ದೆ-2016ರ ಅಡಿಯಲ್ಲಿ ಯಮುನಾವನ್ನು ರಾಷ್ಟ್ರೀಯ ಜಲಮಾರ್ಗ-110 ಎಂದು ಗುರುತಿಸಲಾಗಿದೆ.

Leave a Reply

Your email address will not be published. Required fields are marked *

You may have missed