ಮಹಾರಾಷ್ಟ್ರ ಪೊಲೀಸ್ ಪಡೆಯಲ್ಲೂ ಅಗ್ನಿವೀರರಿಗೆ ಅವಕಾಶ

0
Maharashtra-Police

ನಾಗಪುರ: ಭಾರತೀಯ ಸೇನೆಯಲ್ಲಿ ಅಲ್ಪಾವಧಿ ಸೇವೆ ಪೂರ್ಣಗೊಳಿಸಿದ ಅಗ್ನಿವೀರರಿಗೆ ಮಹಾರಾಷ್ಟ್ರ ಪೊಲೀಸ್ ಪಡೆಯನ್ನು ಸೇರಲು ಅವಕಾಶ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ. ಪೊಲೀಸ್ ಕಾರ್ಯಾಚರಣೆ ಹಾಗೂ ಕರಾವಳಿ ಭದ್ರತೆಯನ್ನು ಬಲಪಡಿಸುವಲ್ಲಿ ಅಗ್ನಿವೀರರ ತರಬೇತಿ ಮತ್ತು ಅನುಭವ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನಾಗಪುರದಲ್ಲಿ ಮಾತನಾಡಿದ ಫಡ್ನವೀಸ್, ಅಲ್ಪಾವಧಿಯ ಸೇನಾ ಸೇವೆ ಪೂರ್ಣಗೊಳಿಸಿದ ಬಳಿಕ ಮಹಾರಾಷ್ಟ್ರ ಪೊಲೀಸ್ ಪಡೆಯನ್ನು ಸೇರಲು ಆಸಕ್ತಿ ತೋರುವ ಅಗ್ನಿವೀರರನ್ನು ನೇಮಿಸಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.

ನೌಕಾಪಡೆಯಿಂದ ಬಂದ ಅಗ್ನಿವೀರರ ಮೊದಲ ತಂಡವನ್ನು ಈಗಾಗಲೇ ಕರಾವಳಿ ಭದ್ರತಾ ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ ಎಂದು ಅವರು ತಿಳಿಸಿದರು. ಗಡಿ ಪ್ರದೇಶಗಳು ಹಾಗೂ ಕಠಿಣ ಭೌಗೋಳಿಕ ಪರಿಸ್ಥಿತಿಗಳಲ್ಲಿ ಸೇವೆ ಸಲ್ಲಿಸಿರುವ ಅನುಭವ ಮತ್ತು ಅವರು ಪಡೆದಿರುವ ವ್ಯಾಪಕ ತರಬೇತಿಯು ಕರಾವಳಿ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದರು.

“ಇದು ಎರಡೂ ಕಡೆಯವರಿಗೆ ಪ್ರಯೋಜನಕಾರಿಯಾಗಿದೆ. ಅಗ್ನಿವೀರರನ್ನು ನಮ್ಮ ವ್ಯವಸ್ಥೆಗೆ ಯಶಸ್ವಿಯಾಗಿ ಸೇರ್ಪಡೆಗೊಳಿಸಿದ್ದೇವೆ,” ಎಂದು ಫಡ್ನವೀಸ್ ಹೇಳಿದರು. ಮುಂದಿನ ದಿನಗಳಲ್ಲಿ ಭೂಸೇನೆ ಮತ್ತು ವಾಯುಪಡೆಯಿಂದ ಸೇವೆ ಪೂರ್ಣಗೊಳಿಸಿ ಬರುವ ಅಗ್ನಿವೀರರಿಗೂ ಮಹಾರಾಷ್ಟ್ರ ಪೊಲೀಸ್ ಪಡೆಯನ್ನು ಸೇರಲು ಅವಕಾಶ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *