ಭೀಕರ ನೌಕಾ ದುರಂತ; 24 ಸಿಬ್ಬಂದಿಯಿದ್ದ ಸರಕು ಹಡಗು ಮುಳುಗಡೆ

ಭುವನೇಶ್ವರ: ಒಡಿಶಾದ ಪಾರದೀಪ್ ಕರಾವಳಿಯಿಂದ ಸುಮಾರು 240 ನಾಟಿಕಲ್ ಮೈಲು ದೂರದಲ್ಲಿ ಪನಾಮಾ ಧ್ವಜದ ‘ಎಂವಿ ಓಷನ್ ವಿನ್ನರ್’ ಸರಕು ಹಡಗು ಬಂಗಾಳ ಕೊಲ್ಲಿಯಲ್ಲಿ ಮುಳುಗಿದೆ. ಹಡಗಿನಲ್ಲಿದ್ದ 24 ಸಿಬ್ಬಂದಿಯಲ್ಲಿ ಇಬ್ಬರನ್ನು ರಕ್ಷಿಸಲಾಗಿದ್ದು, ಇನ್ನೂ 22 ಮಂದಿ ನಾಪತ್ತೆಯಾಗಿದ್ದಾರೆ.
ಸಿಂಗಾಪುರಕ್ಕೆ ತೆರಳುತ್ತಿದ್ದ ಹಡಗು 72,100 ಟನ್ ಕಬ್ಬಿಣದ ಅದಿರು ಸಾಗಿಸುತ್ತಿತ್ತು. ಆಗಸ್ಟ್ 20ರಂದು ರಾತ್ರಿ 10.42ಕ್ಕೆ ಪಾರದೀಪ್ ಬಂದರಿನಿಂದ ಹೊರಟಿತ್ತು. ಸಿಬ್ಬಂದಿಯಲ್ಲಿ 20 ಮಂದಿ ಚೀನಾ, ಮೂವರು ಮ್ಯಾನ್ಮಾರ್ ಹಾಗೂ ಒಬ್ಬರು ಬಾಂಗ್ಲಾದೇಶದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಡಗಿನೊಂದಿಗೆ ಸಂಪರ್ಕ ಕಡಿತಗೊಂಡಿರುವ ಬಗ್ಗೆ ಕಂಪನಿಯು ಶನಿವಾರ ಬೆಳಗ್ಗೆ ಭಾರತೀಯ ಕರಾವಳಿ ಪಡೆಯ ಸಾಗರ ರಕ್ಷಣಾ ಸಮನ್ವಯ ಕೇಂದ್ರಕ್ಕೆ ಮಾಹಿತಿ ನೀಡಿತ್ತು. ತಕ್ಷಣ ಕಾರ್ಯಾಚರಣೆ ಆರಂಭಿಸಿದ MRCC, ಸಮೀಪದಲ್ಲಿದ್ದ MT ಐಸೋಪೋಸ್ ಹಡಗನ್ನು ಶೋಧ ಕಾರ್ಯಕ್ಕೆ ನಿಯೋಜಿಸಿತು.
ರಾತ್ರಿ 8ರ ಸುಮಾರಿಗೆ ಎರಡು ರಕ್ಷಣಾ ತೆಪ್ಪಗಳಿಂದ ಇಬ್ಬರು ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಉಳಿದವರಿಗಾಗಿ ಭಾರತೀಯ ಕರಾವಳಿ ಪಡೆ ಹಾಗೂ ನೌಕಾಪಡೆ ಶೋಧ ಮುಂದುವರಿಸಿವೆ.

ಕಾರ್ಯಾಚರಣೆಗೆ ICG ವರದ್ ಮತ್ತು ಅನ್ಮೋಲ್ ಸೇರಿದಂತೆ ಮೂರು ಕರಾವಳಿ ಪಡೆ ಹಡಗುಗಳನ್ನು ನಿಯೋಜಿಸಲಾಗಿದೆ. ಹೆಚ್ಚುವರಿ ನೆರವಿಗಾಗಿ ವಿಜಿತ್ ಹಡಗನ್ನೂ ಕಳುಹಿಸಲಾಗಿದೆ.
ಹಡಗಿನ ಟ್ರ್ಯಾಕಿಂಗ್ ಸಿಗ್ನಲ್ ಕಳೆದುಹೋಗಲು ತಾಂತ್ರಿಕ ದೋಷ, AIS ನಿಷ್ಕ್ರಿಯಗೊಂಡಿರುವುದು ಅಥವಾ ತುರ್ತು ಪರಿಸ್ಥಿತಿ ಕಾರಣವಾಗಿರಬಹುದು ಎಂಬ ಶಂಕೆಯಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.
