ಬೆಂಗಳೂರು: ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್ ಬಗ್ಗೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಟೀಕೆ

0
basavaraj-bommai-cm-300x286

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್‌ ಕಳಪೆ ಬಜೆಟ್. ಅಭಿವೃದ್ಧಿ ಶೂನ್ಯ, ಪ್ರಗತಿ ರಹಿತವಾಗಿರುವುದರ ಜೊತೆಗೆ ಅತಿ ಹೆಚ್ಚು ಸಾಲ ಮಾಡಿರುವ ಬಜೆಟ್ ಇದಾಗಿದೆ ಎಂದು ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

ಸುಮಾರು ₹1.32 ಲಕ್ಷ ಕೋಟಿ ಸಾಲ ಮಾಡಿ, ಮತ್ತೊಂದೆಡೆ ಸುಮಾರು ₹25 ಸಾವಿರ ಕೋಟಿ ಹೊಸ ತೆರಿಗೆ ವಿಧಿಸಿ, ₹32 ಸಾವಿರ ಕೋಟಿ ಕೊರತೆಯ ಬಜೆಟ್ ಮಂಡನೆ ಮಾಡಿದ್ದಾರೆ. ದಿಕ್ಕು-ದೆಸೆ ಇಲ್ಲದ ಈ ಬಜೆಟ್ ರಾಜ್ಯವನ್ನು ಸಾಲದ ಶೂಲಕ್ಕೆ ತೆಗೆದುಕೊಂಡು ಹೋಗುವಂತಾಗಿದೆ. ಇದರ ಪರಿಣಾಮ ರಾಜ್ಯದ ಹಣಕಾಸಿನ ಮೇಲೆ ದೂರಗಾಮಿ ಪರಿಣಾಮ ಬೀರುವ ಸಾಧ್ಯತೆ ಇದೆ. ಇದು ರಾಜ್ಯವನ್ನು ಕನಿಷ್ಠ 10 ರಿಂದ 15 ವರ್ಷ ಹಿಂದೆ ತಳ್ಳುವಂತಾಗಬಹುದು. 17 ಬಾರಿ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಗಳಿಂದ ಇಂತಹ ಬಜೆಟ್ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ, ಆದ್ದರಿಂದ ನಿರಾಸೆಯಾಗಿದೆ ಎಂದವರು ಹೇಳಿದ್ದಾರೆ.

ನೀರಾವರಿಗೆ ಕೇವಲ ₹22 ಸಾವಿರ ಕೋಟಿ ಮಾತ್ರ ಮೀಸಲಿಡಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಕನಿಷ್ಠ ₹25 ಸಾವಿರ ಕೋಟಿ ಮೀಸಲಿಡಬೇಕಾಗಿತ್ತು. ಆದರೆ, ಅದರ ಕುರಿತು ಸಮರ್ಪಕ ಅನುದಾನವನ್ನು ನೀಡಿಲ್ಲ. ಆರೋಗ್ಯ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಿಗೂ ಅಗತ್ಯ ಮಟ್ಟದ ಅನುದಾನ ನೀಡಲಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಯಾವ ದಿಕ್ಕಿನಲ್ಲಿ ಬಜೆಟ್ ಮಂಡಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತಿಲ್ಲ ಎಂದು ಬೊಮ್ಮಾಯಿ ವಿಶ್ಲೇಷಿಸಿದ್ದಾರೆ.

Leave a Reply

Your email address will not be published. Required fields are marked *