ಪ್ರಪಾತಕ್ಕೆ ಉರುಳಿದ ಖಾಸಗಿ ಬಸ್; 8 ಮಂದಿ ಸಾವು, 10 ಪ್ರಯಾಣಿಕರ ರಕ್ಷಣೆ

0
accident-300x175-1

ಶಿಮ್ಲಾ: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ಮಂದಿ ಮೃತಪಟ್ಟಿದ್ದು, 10 ಜನರು ಗಾಯಗೊಂಡಿದ್ದಾರೆ. ಬೈರಾಗಢ-ತೀಸ್ಸಾ ರಸ್ತೆಯ ದೇವಿಕೋಠಿ ಪ್ರದೇಶದ ಚಾಲುಂಜ್ ಮೋರ್ ಬಳಿ ಖಾಸಗಿ ಬಸ್ ನಿಯಂತ್ರಣ ತಪ್ಪಿ ಕೆಳಗಿನ ರಸ್ತೆಗೆ ಉರುಳಿಬಿದ್ದಿದೆ.

ಶರ್ಮಾ ಬಸ್ ಸರ್ವಿಸ್‌ಗೆ ಸೇರಿದ ಬಸ್ ಬೆಳಗ್ಗೆ 6.30ರ ಸುಮಾರಿಗೆ ಬೈರಾಗಢದಿಂದ ಚಂಬಾ ಕಡೆಗೆ ಹೊರಟಿತ್ತು. ಸುಮಾರು ಮೂರು ಕಿಲೋಮೀಟರ್ ಸಂಚರಿಸಿದ ಬಳಿಕ ಅಪಘಾತ ಸಂಭವಿಸಿದೆ. ಬಸ್‌ನಲ್ಲಿ ಒಟ್ಟು 18 ಮಂದಿ ಪ್ರಯಾಣಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿದ ಬಸ್ ಮೊದಲು ರಸ್ತೆಯಲ್ಲಿ ಪಲ್ಟಿಯಾಗಿ, ಬಳಿಕ ಕೆಳಭಾಗದಲ್ಲಿದ್ದ ರಸ್ತೆಗೆ ಉರುಳಿಬಿದ್ದಿದೆ. ಅಪಘಾತದ ರಭಸಕ್ಕೆ ಹಲವು ಪ್ರಯಾಣಿಕರು ಬಸ್‌ನ ಅವಶೇಷಗಳಡಿ ಸಿಲುಕಿಕೊಂಡಿದ್ದರು.

ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಎನ್‌ಡಿಆರ್‌ಎಫ್, ಪೊಲೀಸರು, ಗೃಹರಕ್ಷಕ ದಳ, ಅಗ್ನಿಶಾಮಕ ಸಿಬ್ಬಂದಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಅವಶೇಷಗಳಡಿ ಸಿಲುಕಿದ್ದವರನ್ನು ಹೊರತೆಗೆದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

27 ಕಿ.ಮೀ ಉದ್ದದ ಬೈರಾಗಢ-ತೀಸ್ಸಾ ಪರ್ವತ ರಸ್ತೆಯು ಕಿರಿದಾದ ಮಾರ್ಗ ಹಾಗೂ ಕಡಿದಾದ ಇಳಿಜಾರುಗಳಿಂದ ಕೂಡಿದ್ದು, ಚುರಾಹ್ ಕಣಿವೆಯ ಪ್ರಮುಖ ಸಂಪರ್ಕ ರಸ್ತೆಯಾಗಿದೆ.

ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *