ಪರಿಷತ್ ಗೆಲುವು 2028ರ ಚುನಾವಣೆಗೆ ದಿಕ್ಸೂಚಿ: ಸುರ್ಜೇವಾಲ

0
aicc-Randeep-Surjewala-750x479-1-300x192-2

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧಿಸಿದ ಗೆಲುವು ಮುಂಬರುವ 2028ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.

ಫಲಿತಾಂಶದ ಕುರಿತು ಪ್ರತಿಕ್ರಿಯಿಸಿರುವ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪರವಾದ ಅಲೆ ಮುಂದುವರಿಯಲಿದೆ ಎಂದು ವಿಶ್ಲೇಷಿಸಿದ್ದಾರೆ.

“ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಐತಿಹಾಸಿಕವಾಗಿದ್ದು, ಜನ ಕಲ್ಯಾಣ ಮತ್ತು ನ್ಯಾಯದ ರಾಜಕೀಯಕ್ಕೆ ಬೆಂಬಲ ಸಿಕ್ಕಿದೆ. ಇದು ಗ್ಯಾರಂಟಿ ಯೋಜನೆಗಳ ಪರವಾದ ಮತ, ಜನರ ಪರವಾದ ಮತ” ಎಂದು ಸುರ್ಜೇವಾಲ ತಿಳಿಸಿದ್ದಾರೆ.

ಕಾಂಗ್ರೆಸ್‌ಗೆ 135 ಶಾಸಕರ ಬಲವಿದ್ದರೂ, ಪಕ್ಷದ ಅಭ್ಯರ್ಥಿಗಳಿಗೆ 151 ಪ್ರಥಮ ಪ್ರಾಶಸ್ತ್ಯದ ಮತಗಳು ಲಭಿಸಿವೆ. ಇದು ರಾಜ್ಯದ ಶಾಸಕರು ಪಕ್ಷದ ಗಡಿ ಮೀರಿ ಸರ್ಕಾರದ ನೀತಿಗಳಿಗೆ ಬೆಂಬಲ ನೀಡಿರುವುದನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ರಾಜಕೀಯ ಎರಡು ಧ್ರುವಗಳ ನಡುವೆ ಸಾಗುತ್ತಿದೆ. ಒಂದು ಕಡೆ ಕಾಂಗ್ರೆಸ್‌ನ ಪಂಚ ಗ್ಯಾರಂಟಿ ಯೋಜನೆಗಳು, ಮತ್ತೊಂದು ಕಡೆ ಬಿಜೆಪಿ-ಜೆಡಿಎಸ್ ಮೈತ್ರಿ ಎಂದು ಸುರ್ಜೇವಾಲ ಹೇಳಿದ್ದಾರೆ.

ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಜನರಿಗೆ ಆರ್ಥಿಕ ನೆರವು ತಲುಪಿದ್ದು, ಜನರು ಕಲ್ಯಾಣ ಹಾಗೂ ಅಭಿವೃದ್ಧಿಯ ಪರವಾಗಿ ಮತ ನೀಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಗೆಲುವು 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗ್ಯಾರಂಟಿ ಯೋಜನೆಗಳ ಬೆಂಬಲ ಮುಂದುವರಿಯುವ ಸೂಚನೆಯಾಗಿದೆ ಎಂದು ಸುರ್ಜೇವಾಲ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed