ನೇಪಾಳ ಪ್ರವಾಹ: ಕೇಂದ್ರ ಹೈ ಅಲರ್ಟ್; ಬಿಹಾರ, ಯುಪಿ ಗಡಿ ಪ್ರದೇಶಗಳ ಮೇಲೆ ನಿಗಾ

0
Nepal-Flash-flood-1

ನವದೆಹಲಿ: ನೇಪಾಳದಲ್ಲಿ ಉಂಟಾಗಿರುವ ಹಠಾತ್ ಪ್ರವಾಹದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಗಂಡಕ್ ನದಿ ಮೂಲಕ ಬಿಹಾರ ಮತ್ತು ಉತ್ತರ ಪ್ರದೇಶದ ಮೇಲೆ ಸಂಭವಿಸಬಹುದಾದ ಪರಿಣಾಮದ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಹಾರ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಭಾರತ–ನೇಪಾಳ ಗಡಿಯ ಸೂಕ್ಷ್ಮ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ನೇಪಾಳದಲ್ಲಿನ ಪ್ರವಾಹದಿಂದ ಉಂಟಾಗಿರುವ ದುರಂತಕ್ಕೆ ಸಂತಾಪ ಸೂಚಿಸಿದ ಅವರು, ಸಂಕಷ್ಟದ ಸಂದರ್ಭದಲ್ಲಿ ಭಾರತ ನೇಪಾಳದೊಂದಿಗೆ ನಿಲ್ಲಲಿದೆ ಎಂದು ತಿಳಿಸಿದ್ದಾರೆ.

ಸೂಕ್ಷ್ಮ ಗಡಿ ಪ್ರದೇಶಗಳಲ್ಲಿ ಸ್ಥಳೀಯ ಆಡಳಿತ, ರಕ್ಷಣಾ ತಂಡಗಳು ಹಾಗೂ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF)ಗಳನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ. ಅಗತ್ಯವಿರುವ ಕಡೆ ಸ್ಥಳಾಂತರ ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಕೇಂದ್ರ ಜಲ ಆಯೋಗದ ಮಾಹಿತಿ ಪ್ರಕಾರ, ನೇಪಾಳದ ಫರ್ಕೆ ಖೋಲಾದಲ್ಲಿ ತ್ರಿಶೂಲಿ ನದಿಯ ನೀರಿನ ಮಟ್ಟದಲ್ಲಿ ಏಕಾಏಕಿ ಏರಿಕೆ ದಾಖಲಾಗಿದೆ. ಇದು ನೇಪಾಳ–ಚೀನಾ ಗಡಿ ಸಮೀಪ ಸಂಭವಿಸಿರುವ ದಿಢೀರ್ ಪ್ರವಾಹ ಅಥವಾ ಹಿಮನದಿ ಸರೋವರ ಸ್ಫೋಟದ ಪ್ರವಾಹಕ್ಕೆ (GLOF) ಸಂಬಂಧಿಸಿರಬಹುದು ಎಂದು ಶಂಕಿಸಲಾಗಿದೆ.

ಪ್ರವಾಹದ ನೀರು ಗಂಡಕ್ ನದಿ ವ್ಯವಸ್ಥೆಯ ಮೂಲಕ ಕೆಳಭಾಗಕ್ಕೆ ಹರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಬಿಹಾರ ಮತ್ತು ಉತ್ತರ ಪ್ರದೇಶದ ಅಧಿಕಾರಿಗಳು ನಿರಂತರ ನಿಗಾ ವಹಿಸಿದ್ದಾರೆ.

ಗೃಹ, ವಿದೇಶಾಂಗ, ಜಲಶಕ್ತಿ ಹಾಗೂ ರಕ್ಷಣಾ ಸಚಿವಾಲಯಗಳು ಪರಿಸ್ಥಿತಿಯನ್ನು ಸಮನ್ವಯದಿಂದ ಮೇಲ್ವಿಚಾರಣೆ ಮಾಡುತ್ತಿವೆ. ಇದೇ ವೇಳೆ, ನೇಪಾಳದ ಕೆಲವು ಜಲಾಶಯಗಳಲ್ಲಿ ನೀರಿನ ಮಟ್ಟ ಇಳಿಕೆಯಾಗಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಕೇಂದ್ರ ಜಲ ಆಯೋಗ ತಿಳಿಸಿದೆ.

ನೇಪಾಳದಲ್ಲಿ ಭಾರತೀಯರು ಕಾಣೆಯಾಗಿರುವ ವರದಿಗಳ ಹಿನ್ನೆಲೆಯಲ್ಲಿ ಕಠ್ಮಂಡುವಿನ ಭಾರತೀಯ ರಾಯಭಾರ ಕಚೇರಿಯು ಅಗತ್ಯ ನೆರವು ಹಾಗೂ ಮಾಹಿತಿಗಾಗಿ ತುರ್ತು ಸಹಾಯವಾಣಿ ವ್ಯವಸ್ಥೆ ಮಾಡಿದೆ.

Leave a Reply

Your email address will not be published. Required fields are marked *