ಕಾಂಗ್ರೆಸ್‌ಗೆ ಶಾಕ್: ಮಾಜಿ ಪಾಲಿಕೆ ಸದಸ್ಯರು ಸೇರಿ ಮೂವರು ಬಿಜೆಪಿ ಸೇರ್ಪಡೆ

0
bjp-flag2-300x190-1

ಬೆಂಗಳೂರು: ಕಾಂಗ್ರೆಸ್ ಪಕ್ಷದ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ನಾರಾಯಣ್, ಸುರೇಶ್ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಮೋದ್ ಶ್ರೀನಿವಾಸ್ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಮಲ್ಲೇಶ್ವರಂನ ಜಗನ್ನಾಥ ಭವನದಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಸಿ.ಕೆ. ರಾಮಮೂರ್ತಿ, ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಸೇರಿದಂತೆ ಬಿಜೆಪಿ ಮುಖಂಡರು ಪಕ್ಷದ ಧ್ವಜ ನೀಡಿ ಅವರನ್ನು ಬರಮಾಡಿಕೊಂಡರು.

ಈ ವೇಳೆ ಮಾತನಾಡಿದ ಆರ್. ಅಶೋಕ್, ನಾವೆಲ್ಲರೂ ಒಂದೇ ಮನೆಯಲ್ಲಿ, ಒಂದೇ ಕುಟುಂಬದಂತೆ ಇದ್ದವರು. ರಾಜಕೀಯ ಕಾರಣಗಳಿಂದ ಪಕ್ಷದಿಂದ ಹೊರ ಹೋಗಿದ್ದವರು ಇದೀಗ ಮರಳಿ ಸ್ವಂತ ಮನೆಗೆ ಬಂದಿದ್ದಾರೆ ಎಂದು ಹೇಳಿದರು.

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ನಡುವೆಯೇ ಕಾರ್ಯಕರ್ತರು ಮರಳಿ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಮತ್ತಷ್ಟು ಸಂತಸ ತಂದಿದೆ. ಹಳೆಯ ವಿಚಾರಗಳನ್ನು ಮರೆತು ಎಲ್ಲರೂ ಒಂದಾಗಿ ಪಕ್ಷ ಹಾಗೂ ದೇಶಕ್ಕಾಗಿ ಕೆಲಸ ಮಾಡಬೇಕು. ಮುಂಬರುವ ಬಿಬಿಎಂಪಿ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಸಂಘಟಿತರಾಗಿ ಬಿಜೆಪಿ ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಬಲಿಷ್ಠವಾಗಿ ಮುನ್ನಡೆಯುತ್ತಿದೆ. ಪ್ರಮೋದ್ ಶ್ರೀನಿವಾಸ್ ಅವರು ತಮ್ಮ ಸರ್ಕಾರಿ ಹುದ್ದೆಯನ್ನು ತೊರೆದು ಪಕ್ಷ ಸೇರ್ಪಡೆಯಾಗಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಅಶೋಕ್ ಹೇಳಿದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ವಿವಿಧ ಕಾರಣಗಳಿಂದ ಕೆಲವು ವರ್ಷಗಳ ಹಿಂದೆ ಪಕ್ಷದಿಂದ ಹೊರ ಹೋಗಿದ್ದವರು ಇದೀಗ ಬಿಜೆಪಿಗೆ ಮರಳಿದ್ದಾರೆ. ಇವರೆಲ್ಲರೂ ಪಕ್ಷದ ಬೆಳವಣಿಗೆಗೆ ಈ ಹಿಂದೆ ಕೊಡುಗೆ ನೀಡಿದ್ದಾರೆ. ಅವರ ಸೇರ್ಪಡೆಯಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ ಎಂದರು.

ಪದ್ಮನಾಭನಗರದಲ್ಲಿ ಶೀಘ್ರದಲ್ಲೇ ಬೃಹತ್ ಸಮಾವೇಶ ಆಯೋಜಿಸಲಾಗುವುದು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕರಿಸುತ್ತಿದ್ದು, ಬದಲಾವಣೆಯ ಸಮಯ ಬಂದಿದೆ ಎಂದು ತೇಜಸ್ವಿ ಸೂರ್ಯ ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಪೂರ್ಣಿಮಾ ಪ್ರಕಾಶ್, ಉಮೇಶ್ ಕಬ್ಬಾಳ್, ಅಂಜನಪ್ಪ ಸೇರಿದಂತೆ ಚೋಳರಾಜ್, ರಕ್ಷಿತ್ ನಾಗರಾಜು, ಹರೀಶ್ ಹಾಗೂ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *