ಕರ್ನಾಟಕಕ್ಕೆ ಸಾಕಷ್ಟು ರಸಗೊಬ್ಬರ ಪೂರೈಕೆ ಖಚಿತ: ಕಾಂಗ್ರೆಸ್ ಆರೋಪಗಳಿಗೆ ಪ್ರಲ್ಹಾದ್ ಜೋಶಿ ಸ್ಪಷ್ಟನೆ

0
Pralhad-Joshi-1-300x203-1

ನವದೆಹಲಿ: ಜಾಗತಿಕ ಬಿಕ್ಕಟ್ಟಿನ ನಡುವೆಯೂ ಕೇಂದ್ರ ಸರ್ಕಾರವು ಕರ್ನಾಟಕದ ರೈತರಿಗೆ 2026ರ ಮುಂಗಾರು (ಖಾರಿಫ್) ಹಂಗಾಮಿಗೆ ಅಗತ್ಯವಿರುವಷ್ಟು ರಸಗೊಬ್ಬರ ಲಭ್ಯತೆಯನ್ನು ಖಚಿತಪಡಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ರಾಜ್ಯಕ್ಕೆ ಸಮರ್ಪಕ ಪ್ರಮಾಣದಲ್ಲಿ ರಸಗೊಬ್ಬರ ಪೂರೈಕೆಯಾಗುತ್ತಿಲ್ಲ ಎಂಬ ಕಾಂಗ್ರೆಸ್ ನಾಯಕರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅವರು, ಇದು ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಆರೋಪಿಸಿದ್ದಾರೆ.

ಯೂರಿಯಾ, ಡಿಎಪಿ ಮತ್ತು ಎನ್‌ಪಿಕೆಎಸ್ ರಸಗೊಬ್ಬರಗಳ ಲಭ್ಯತೆ ಬಗ್ಗೆ ಮಾಹಿತಿ ನೀಡಿದ ಜೋಶಿ, ಜೂನ್ 10ರವರೆಗೆ ಕರ್ನಾಟಕಕ್ಕೆ ಯೂರಿಯಾ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗಿದೆ ಎಂದು ಹೇಳಿದ್ದಾರೆ.

ಯೂರಿಯಾಗೆ 3.13 ಲಕ್ಷ ಮೆಟ್ರಿಕ್ ಟನ್ ಅಗತ್ಯದ ಎದುರು 5.59 ಲಕ್ಷ ಮೆಟ್ರಿಕ್ ಟನ್ ಲಭ್ಯತೆ ಖಚಿತಪಡಿಸಲಾಗಿದ್ದು, ಮಾರಾಟದ ನಂತರವೂ 3.12 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಉಳಿದಿದೆ ಎಂದು ತಿಳಿಸಿದ್ದಾರೆ.

ಅದೇ ರೀತಿ ಡಿಎಪಿಗೆ 1.89 ಲಕ್ಷ ಮೆಟ್ರಿಕ್ ಟನ್ ಅಗತ್ಯದ ಎದುರು 2.57 ಲಕ್ಷ ಮೆಟ್ರಿಕ್ ಟನ್ ಪೂರೈಕೆ ಖಚಿತಪಡಿಸಲಾಗಿದೆ. ಎನ್‌ಪಿಕೆಎಸ್‌ಗೆ 4.36 ಲಕ್ಷ ಮೆಟ್ರಿಕ್ ಟನ್ ಅಗತ್ಯವಿದ್ದರೂ 9.28 ಲಕ್ಷ ಮೆಟ್ರಿಕ್ ಟನ್ ಲಭ್ಯತೆ ಒದಗಿಸಲಾಗಿದೆ ಎಂದು ಹೇಳಿದ್ದಾರೆ.

ಇರಾನ್-ಇಸ್ರೇಲ್ ಸಂಘರ್ಷ ಸೇರಿದಂತೆ ಜಾಗತಿಕ ಪೂರೈಕೆ ಸವಾಲುಗಳ ನಡುವೆಯೂ ದೇಶೀಯ ಉತ್ಪಾದನೆ ಹೆಚ್ಚಿಸಿ ಮತ್ತು ಆಮದು ವ್ಯವಸ್ಥೆ ಸುಗಮಗೊಳಿಸಿ ರಸಗೊಬ್ಬರ ಪೂರೈಕೆ ನಿರ್ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಗಳ ನಡುವೆ ಸಮರ್ಪಕ ವಿತರಣೆ, ದಾಸ್ತಾನು ನಿಯಂತ್ರಣ ಮತ್ತು ಕಾಳಸಂತೆ ತಡೆಗಟ್ಟುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ ಎಂದು ಜೋಶಿ ಆರೋಪಿಸಿದ್ದಾರೆ. ರೈತರ ಹಿತ ರಕ್ಷಣೆಗಾಗಿ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *