ಐಚಿ-ನಗೋಯಾ ಏಷ್ಯನ್ ಕ್ರೀಡಾಕೂಟ: 85 ಪದಕಗಳೊಂದಿಗೆ ಭಾರತಕ್ಕೆ ನಾಲ್ಕನೇ ಸ್ಥಾನ

0
Asian-Games-2026-ends

ಐಚಿ-ನಗೋಯಾ: ಎರಡು ವಾರಗಳಿಗೂ ಹೆಚ್ಚು ಕಾಲ ನಡೆದ ಐಚಿ-ನಗೋಯಾ ಏಷ್ಯನ್ ಕ್ರೀಡಾಕೂಟಕ್ಕೆ ತೆರೆಬಿದ್ದಿದ್ದು, ಭಾರತವು ಒಟ್ಟು 85 ಪದಕಗಳನ್ನು ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ಭಾರತದ ಕ್ರೀಡಾಪಟುಗಳು 21 ಚಿನ್ನ, 27 ಬೆಳ್ಳಿ ಹಾಗೂ 37 ಕಂಚಿನ ಪದಕಗಳನ್ನು ಗೆದ್ದು ವಿವಿಧ ಕ್ರೀಡಾ ವಿಭಾಗಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದ ಶೂಟರ್ ನೀರು ಧಾಂದಾ ಅವರು ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿ ತಂಡವನ್ನು ಮುನ್ನಡೆಸಿದರು.

ಹಾಕಿ, ಕ್ರಿಕೆಟ್, ಬಾಕ್ಸಿಂಗ್, ಬಿಲ್ಲುಗಾರಿಕೆ, ಗಾಲ್ಫ್ ಮತ್ತು ಅಥ್ಲೆಟಿಕ್ಸ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಮಿಂಚಿದರು. ವಿಶೇಷವಾಗಿ ಮಹಿಳಾ ಕ್ರೀಡಾಪಟುಗಳು ಪದಕಗಳ ಗಳಿಕೆಯಲ್ಲಿ ಮಹತ್ವದ ಕೊಡುಗೆ ನೀಡುವ ಮೂಲಕ ಭಾರತದ ಸಾಧನೆಗೆ ಬಲ ತುಂಬಿದರು.

ಭಾರತದ ಸಾಧನೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದ್ದು, ಈ ಅಭಿಯಾನವು ದೇಶದ ಕ್ರೀಡಾ ಪಯಣದ ಹೆಮ್ಮೆಯ ಅಧ್ಯಾಯವಾಗಿದೆ ಎಂದು ಬಣ್ಣಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ಕ್ರೀಡಾಪಟುಗಳ ಪ್ರತಿಭೆ, ದೃಢನಿಶ್ಚಯ ಮತ್ತು ಕ್ರೀಡಾ ಶ್ರೇಷ್ಠತೆಯನ್ನು ಶ್ಲಾಘಿಸಿದ್ದಾರೆ. ಕ್ರೀಡಾಪಟುಗಳೊಂದಿಗೆ ತರಬೇತುದಾರರು ಹಾಗೂ ಸಹಾಯಕ ಸಿಬ್ಬಂದಿಯ ಸಮರ್ಪಣೆ ಮತ್ತು ತ್ಯಾಗವನ್ನೂ ಪ್ರಶಂಸಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕ್ರೀಡಾಪಟುಗಳಿಗೆ ದೊರೆಯುತ್ತಿರುವ ನಿರಂತರ ಪ್ರೋತ್ಸಾಹ ಮತ್ತು ಬೆಂಬಲದಿಂದ ಭಾರತೀಯ ಕ್ರೀಡೆ ಮತ್ತಷ್ಟು ಬಲಗೊಳ್ಳುತ್ತಿದೆ ಎಂದು ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಸಮಾರೋಪ ಸಮಾರಂಭದೊಂದಿಗೆ ಕ್ರೀಡಾಕೂಟಕ್ಕೆ ಅಧಿಕೃತ ತೆರೆಬಿದ್ದಿದ್ದು, ಏಷ್ಯನ್ ಕ್ರೀಡಾಕೂಟದ ಜ್ಯೋತಿಯನ್ನು 2030ರ ಆವೃತ್ತಿಯ ಆತಿಥೇಯ ರಾಷ್ಟ್ರವಾದ ಕತಾರ್‌ನ ಪ್ರತಿನಿಧಿಗಳಿಗೆ ಹಸ್ತಾಂತರಿಸಲಾಯಿತು. ಮುಂದಿನ ಏಷ್ಯನ್ ಕ್ರೀಡಾಕೂಟವು ದೋಹಾದಲ್ಲಿ ನಡೆಯಲಿದೆ.

Leave a Reply

Your email address will not be published. Required fields are marked *