ಎಲೆಕ್ಟ್ರಿಕ್ ಬಸ್‌, ಟ್ರಕ್ ಬಳಕೆ ಹೆಚ್ಚಿಸಲು ಕೇಂದ್ರದ ಚಿಂತನೆ

Electric-Bus-Electric-Truck-300x178-1

ನವದೆಹಲಿ: ದೇಶದಲ್ಲಿ ಎಲೆಕ್ಟ್ರಿಕ್ ಬಸ್‌ಗಳು ಮತ್ತು ಎಲೆಕ್ಟ್ರಿಕ್ ಟ್ರಕ್‌ಗಳ ಬಳಕೆಯನ್ನು ವೇಗಗೊಳಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಖಾಸಗಿ ವಲಯದಲ್ಲಿ ಇವಿ ವಾಣಿಜ್ಯ ವಾಹನಗಳ ಅಳವಡಿಕೆಗೆ ಹಣಕಾಸು ನೆರವು ಮತ್ತು ಹೊಸ ವ್ಯವಸ್ಥೆಗಳ ಕುರಿತು ಚರ್ಚಿಸಲು ಭಾರೀ ಕೈಗಾರಿಕಾ ಸಚಿವಾಲಯ ಬುಧವಾರ ಉನ್ನತ ಮಟ್ಟದ ಸಭೆ ನಡೆಸಿತು.

ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಸ್‌ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಹಾಗೂ ಎಸ್‌ಐಡಿಬಿಐ ಸೇರಿದಂತೆ ಹಲವು ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು. ಸಾರಿಗೆ ಸಂಘಟನೆಗಳು ಮತ್ತು ಖಾಸಗಿ ಬಸ್‌, ಟ್ರಕ್ ನಿರ್ವಾಹಕರ ಪ್ರತಿನಿಧಿಗಳೂ ಉಪಸ್ಥಿತರಿದ್ದರು.

ಎಲೆಕ್ಟ್ರಿಕ್ ವಾಣಿಜ್ಯ ವಾಹನ ಖರೀದಿಯಲ್ಲಿ ಎದುರಾಗುತ್ತಿರುವ ಹಣಕಾಸು ಸಮಸ್ಯೆಗಳು ಸಭೆಯ ಪ್ರಮುಖ ಚರ್ಚಾ ವಿಷಯವಾಗಿತ್ತು. ಸಾಲ ಮಂಜೂರಿಗೆ ಅನುಕೂಲವಾಗುವಂತೆ ಕ್ರೆಡಿಟ್ ಗ್ಯಾರಂಟಿ ಯೋಜನೆ ಹಾಗೂ ಬಡ್ಡಿದರ ಸಬ್ಸಿಡಿ ನೀಡುವ ಸಾಧ್ಯತೆಗಳ ಕುರಿತು ಚರ್ಚೆ ನಡೆಯಿತು.

ಪ್ರಸ್ತಾವಿತ ಯೋಜನೆಯಡಿ ಹಣಕಾಸು ಸಂಸ್ಥೆಗಳ ಸಾಲ ಅಪಾಯವನ್ನು ಕಡಿಮೆ ಮಾಡುವ ಉದ್ದೇಶವಿದ್ದು, ಎಲೆಕ್ಟ್ರಿಕ್ ಬಸ್ ಮತ್ತು ಟ್ರಕ್ ಖರೀದಿಸುವ ಖಾಸಗಿ ನಿರ್ವಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

ಭಾರತದಲ್ಲಿ ಸಾರ್ವಜನಿಕ ಸಾರಿಗೆಯ ಪ್ರಮುಖ ಆಧಾರ ಬಸ್‌ಗಳಾಗಿದ್ದರೆ, ಸರಕು ಸಾಗಣೆಯಲ್ಲಿ ಟ್ರಕ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಇವುಗಳಿಂದ ಇಂಧನ ಬಳಕೆ ಮತ್ತು ಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆ, ವಾಣಿಜ್ಯ ವಾಹನ ವಲಯದ ವಿದ್ಯುದೀಕರಣ ಅಗತ್ಯವಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇಂಧನ ಭದ್ರತೆ, ತೈಲ ಆಮದು ಕಡಿತ ಮತ್ತು 2070ರ ನಿವ್ವಳ ಶೂನ್ಯ ಗುರಿ ಸಾಧನೆಗೆ ಎಲೆಕ್ಟ್ರಿಕ್ ವಾಹನಗಳ ಬಳಕೆ ಅತ್ಯಗತ್ಯ ಎಂದು ಸರ್ಕಾರ ಹೇಳಿದೆ.

ಆತ್ಮನಿರ್ಭರ ಭಾರತ ಮತ್ತು ವಿಕ್ಷಿತ್ ಭಾರತ್ 2047 ದೃಷ್ಟಿಕೋನದಡಿ ಸುಸ್ಥಿರ ಸಾರಿಗೆ ವ್ಯವಸ್ಥೆ ನಿರ್ಮಾಣಕ್ಕೆ ಈ ಸಭೆ ಮಹತ್ವದ ಹೆಜ್ಜೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.