ಉಪಚುನಾವಣೆಯ ಫಲಿತಾಂಶ; ವಿಧಾನಸಭೆಯಲ್ಲಿ ಕಾಂಗ್ರೆಸ್ ಸಂಖ್ಯಾಬಲ 138ಕ್ಕೆ ಏರಿಕೆ
ಬೆಂಗಳೂರು: ಶಿಗ್ಗಾವಿ, ಚನ್ನಪಟ್ಟಣ, ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ನಂತರ ವಿಧಾನಸಭೆಯಲ್ಲಿ ಕಾಂಗ್ರೆಸ್ ಸಂಖ್ಯಾಬಲ 138ಕ್ಕೆ ಏರಿಕೆಯಾಗಿದೆ. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಹೆಚ್ಚುವರಿ ಸ್ಥಾನಗಳನ್ನು ಗೆದ್ದುಕೊಂಡಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ದಾನ ಧರ್ಮ ಮಾಡುವ ಈ ಕೈ ಅಧಿಕಾರದಲ್ಲಿದ್ದ ಕಾರಣ ಜನರ ಬದುಕು ಕಟ್ಟಿಕೊಳ್ಳಲು ಗ್ಯಾರಂಟಿ ಯೋಜನೆ ಜಾರಿ ಮಾಡಲಾಯಿತು. ಸಿದ್ದರಾಮಯ್ಯ ಅವರ ಸರ್ಕಾರದ ಪರಿಶುದ್ಧ ಆಡಳಿತಕ್ಕೆ ಜನ ಬೆಂಬಲ ನೀಡುತ್ತಿದ್ದಾರೆ ಎಂದರು.
ಚನ್ನಪಟ್ಟಣದಲ್ಲಿ ಅಪೂರ್ವ ಸಹೋದರರ ಚುನಾವಣೆಯಲ್ಲ. ಇದು ಜನರ ಚುನಾವಣೆ, ಜನರ ಗೆಲುವು. ಕ್ಷೇತ್ರದಲ್ಲಿ ಜನ ಪ್ರಾರಂಭದಿಂದಲೂ ಜನರು ತಮ್ಮ ಬದುಕು ಕಟ್ಟಿಕೊಳ್ಳಬೇಕು. ಅಭಿವೃದ್ಧಿ ನೋಡಬೇಕು ಎಂದು ಜೆಡಿಎಸ್ ಗೆ ಅವಕಾಶ ನೀಡದೆ ಕಾಂಗ್ರೆಸ್ ಸರ್ಕಾರಕ್ಕೆ ಆಶೀರ್ವಾದ ಮಾಡಿದ್ದಾರೆ. ಸಂಡೂರಿನಲ್ಲಿ ಗೆಲ್ಲಲು ವಿಶೇಷ ನಾಯಕತ್ವ ನೀಡಿದ್ದರು. ಅದಕ್ಕೆ ಜನ ಉತ್ತರ ನೀಡಿದ್ದಾರೆ. ಈಗ ನಮ್ಮ ಸರ್ಕಾರದ ಸಂಖ್ಯಾಬಲ 138 ಆಗಿದೆ. ಇನ್ನು ಬೇರೆ ಲೆಕ್ಕಾಚಾರದ ಬಗ್ಗೆ ಈಗ ಮಾತನಾಡುವುದಿಲ್ಲ” ಎಂದು ತಿಳಿಸಿದರು.
“ಈ ಗೆಲುವಿಗೆ ಗ್ಯಾರಂಟಿ ಯೋಜನೆಗಳು, ಸಿದ್ದರಾಮಯ್ಯ ಅವರ ನಾಯಕತ್ವ ಹಾಗೂ ನಮ್ಮ ಕಾರ್ಯಕರ್ತರು ಮತ್ತು ಶಾಸಕರ ಪರಿಶ್ರಮ ಕಾರಣ. ಅವರ ಹಗಲು ರಾತ್ರಿ ಶ್ರಮಿಸಿದ್ದರ ಫಲ ಇದು. ಇಲ್ಲಿ ನಾನು ಹಾಗೂ ಸಿದ್ದರಾಮಯ್ಯ ಅವರಷ್ಟೇ ಮುಖ್ಯವಲ್ಲ. ಈ ತೀರ್ಪನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಆಡಳಿತ ಮುಂದುವರಿಸಿಕೊಂಡು ಹೋಗುತ್ತೇವೆ ಎಂದರು.
ಮಾಧ್ಯಮಗಳು ನಮಗೆ ಮುಖಭಂಗ ಎಂದು ಬರೆದಿದ್ದರು. ಅವರಿಗೆ ತೋಚಿದ್ದು ಅವರು ಬರೆದಿದ್ದರು. ಈಗ ಫಲಿತಾಂಶದ ಸಂಖ್ಯೆಗಳೇ ಉತ್ತರ ನೀಡಿವೆ. ಮೂರು ಕ್ಷೇತ್ರದ ಮತದಾರರಿಗೆ ಸಾಷ್ಟಾಂಗ ನಮನ ಅರ್ಪಿಸುತ್ತೇನೆ. ನೀವು ಕೊಟ್ಟಿರುವ ಈ ಸಾಲವನ್ನು ಜವಾಬ್ದಾರಿಯುತ ಆಡಳಿತದ ಮೂಲಕ ತೀರಿಸುತ್ತೇವೆ. ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದು, ಹೀಗೆ ನಮ್ಮ ಒಗ್ಗಟ್ಟು ಮುಂದುವರಿಸಿಕೊಂಡು ರಾಜ್ಯದ ಜನರ ಸೇವೆ ಮಾಡುತ್ತೇವೆ” ಎಂದು ಡಿಕೆಶಿ ಭರವಸೆ ನೀಡಿದರು.