ಅಮೆರಿಕದಿಂದ ದ್ರವೀಕೃತ ಪೆಟ್ರೋಲಿಯಂ ಅನಿಲ; ಮಂಗಳೂರು ತಲುಪಿದ LPG ಹಡಗು

0
israel war - us war ship

ನವದೆಹಲಿ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆಯೂ ಭಾರತಕ್ಕೆ ಇಂಧನ ಪೂರೈಕೆ ನಿರಂತರವಾಗಿರುವ ಭರವಸೆ ಮೂಡಿಸುವ ಬೆಳವಣಿಗೆಯಾಗಿ, ಅಮೆರಿಕದಿಂದ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಸಾಗಿಸಿದ ಹಡಗು ಮಂಗಳೂರು ಬಂದರನ್ನು ತಲುಪಿದೆ.

ಅಮೆರಿಕದ ಟೆಕ್ಸಾಸ್‌ನಿಂದ ಹೊರಟ ‘ಪಿಕ್ಸಿಸ್ ಪಯೋನೀರ್’ ಹಡಗು ಯಶಸ್ವಿಯಾಗಿ ಕರಾವಳಿಗೆ ಆಗಮಿಸಿದ್ದು, ದೇಶದ ಇಂಧನ ಭದ್ರತೆಗೆ ಮಹತ್ವದ ನೆರವಾಗಲಿದೆ. ಇದೇ ವೇಳೆ, ‘ಅಕ್ವಾ ಟೈಟಾನ್’ ಹಡಗು ಸೇರಿದಂತೆ ಇತರೆ ತೈಲ ಸಾಗಣೆ ನೌಕೆಗಳೂ ಮಂಗಳೂರಿಗೆ ಆಗಮಿಸಿರುವುದಾಗಿ ವರದಿಯಾಗಿದೆ.

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದ ಜಾಗತಿಕ ಇಂಧನ ಪೂರೈಕೆ ಸರಪಳಿಗೆ ಅಡ್ಡಿಪಡಿಸುತ್ತಿರುವ ಸಂದರ್ಭದಲ್ಲಿ, ಅಮೆರಿಕದಿಂದ ಆಗಮಿಸಿರುವ ಈ ಹಡಗು ಮಹತ್ವ ಪಡೆದುಕೊಂಡಿದೆ. ಹಡಗು ಸಮುದ್ರದಲ್ಲಿ ಸುಮಾರು 18 ನಾಟಿಕಲ್ ಮೈಲು ದೂರದಲ್ಲಿ ನಿಂತಿದ್ದು, ಸಿಂಗಲ್-ಪಾಯಿಂಟ್ ಮೂರಿಂಗ್ ವ್ಯವಸ್ಥೆಯ ಮೂಲಕ ಇಂಧನವನ್ನು ಪೈಪ್‌ಲೈನ್ ಮೂಲಕ ಎಂಆರ್‌ಪಿಎಲ್‌ಗೆ ವರ್ಗಾಯಿಸಲಾಗುತ್ತಿದೆ.

ಇದೇ ಸಂದರ್ಭದಲ್ಲಿ, ರಷ್ಯಾದ ಕಚ್ಚಾ ತೈಲ ಸಾಗಣೆ ಹಡಗು ಕೂಡ ಮಂಗಳೂರಿಗೆ ತಲುಪಿರುವುದು ಗಮನಾರ್ಹ. ಮಧ್ಯಪ್ರಾಚ್ಯದಲ್ಲಿ ಇರಾನ್-ಅಮೆರಿಕಾ-ಇಸ್ರೇಲ್ ಸಂಘರ್ಷದ ಪರಿಣಾಮವಾಗಿ ಉಂಟಾದ ಪೂರೈಕೆ ವ್ಯತ್ಯಯದ ನಡುವೆ ಭಾರತ ಪರ್ಯಾಯ ಮೂಲಗಳಿಂದ ಇಂಧನ ಖರೀದಿಯನ್ನು ಹೆಚ್ಚಿಸಿದೆ.

ಹಾರ್ಮುಜ್ ಜಲಸಂಧಿ ಮೂಲಕ ಅಪಾಯಕಾರಿ ಮಾರ್ಗದಲ್ಲಿ ಸಾಗಿದ ಹಡಗುಗಳು ಭಾರತಕ್ಕೆ ತಲುಪಿರುವುದು, ಜಾಗತಿಕ ಅನಿಶ್ಚಿತತೆ ನಡುವೆಯೂ ದೇಶದ ಇಂಧನ ಭದ್ರತೆಯನ್ನು ಕಾಯ್ದುಕೊಳ್ಳುವ ಪ್ರಯತ್ನಕ್ಕೆ ಸಾಕ್ಷಿಯಾಗಿದೆ.

ಈ ನಡುವೆ, ಪರ್ಷಿಯನ್ ಕೊಲ್ಲಿಯಲ್ಲಿ 600ಕ್ಕೂ ಹೆಚ್ಚು ಭಾರತೀಯ ನಾವಿಕರಿರುವ ಹಡಗುಗಳ ಚಲನವಲನವನ್ನು ಭಾರತೀಯ ಅಧಿಕಾರಿಗಳು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

You may have missed