ಅಭಿವೃದ್ಧಿ ಹೊಂದಿದ ಭಾರತದ ಹಾದಿ ಕೃಷಿಭೂಮಿ ಮತ್ತು ಹಳ್ಳಿಗಳ ಮೂಲಕ ಸಾಗುತ್ತದೆ: ಓಂ ಬಿರ್ಲಾ


ನವದೆಹಲಿ: 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಭಾರತದ ಗುರಿ ಕೃಷಿಭೂಮಿ, ಹೊಲಗಳು ಮತ್ತು ಹಳ್ಳಿಗಳ ಪ್ರಗತಿಯೊಂದಿಗೆ ನೇರವಾಗಿ ಸಂಬಂಧಿಸಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ “ವಿಕ್ಷಿತ್ ಭಾರತ್@2047 ಗಾಗಿ ಸುಸ್ಥಿರ ಕೃಷಿ: ಸಂಪ್ರದಾಯ, ತಂತ್ರಜ್ಞಾನ ಮತ್ತು ಸ್ಪಷ್ಟ ಫಲಿತಾಂಶಗಳು” ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸುಸ್ಥಿರ ಕೃಷಿ, ಸಂಶೋಧನೆ ಮತ್ತು ತಾಂತ್ರಿಕ ನಾವೀನ್ಯತೆಗಳು ಭಾರತದ ಭವಿಷ್ಯದ ಅಭಿವೃದ್ಧಿಯ ಪ್ರಮುಖ ಆಧಾರಸ್ತಂಭಗಳಾಗಿವೆ ಎಂದು ಹೇಳಿದರು.
ಕೃಷಿ ಕೇವಲ ಆರ್ಥಿಕ ಚಟುವಟಿಕೆಯಲ್ಲ, ಅದು ಭಾರತದ ಸಂಸ್ಕೃತಿ, ನಾಗರಿಕತೆ ಮತ್ತು ಜೀವನಶೈಲಿಯ ಭಾಗವಾಗಿದೆ ಎಂದು ಬಿರ್ಲಾ ಹೇಳಿದರು. ಆಹಾರ ಭದ್ರತೆ, ಗ್ರಾಮೀಣ ಸಮೃದ್ಧಿ ಮತ್ತು ಸಮಗ್ರ ಅಭಿವೃದ್ಧಿಗೆ ಕೃಷಿ ಕ್ಷೇತ್ರದ ಬಲವರ್ಧನೆ ಅಗತ್ಯ ಎಂದರು.
ಹವಾಮಾನ ಬದಲಾವಣೆ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸಲು ಸಾಂಪ್ರದಾಯಿಕ ಕೃಷಿ ಜ್ಞಾನವನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸಬೇಕು ಎಂದು ಅವರು ಒತ್ತಿ ಹೇಳಿದರು.
ಡ್ರೋನ್ಗಳು, ಕೃತಕ ಬುದ್ಧಿಮತ್ತೆ, ಡಿಜಿಟಲ್ ಕೃಷಿ ಮತ್ತು ದತ್ತಾಂಶ ವಿಶ್ಲೇಷಣೆ ಕೃಷಿ ಕ್ಷೇತ್ರವನ್ನು ಪರಿವರ್ತಿಸುತ್ತಿವೆ ಎಂದು ತಿಳಿಸಿದ ಅವರು, ಕೃಷಿ ಆಧಾರಿತ ಕೈಗಾರಿಕೆಗಳು, ಆಹಾರ ಸಂಸ್ಕರಣೆ ಮತ್ತು ಕೃಷಿ ಸ್ಟಾರ್ಟ್ಅಪ್ಗಳ ವಿಸ್ತರಣೆಗೆ ಕರೆ ನೀಡಿದರು.
ನೀರಿನ ಸಂರಕ್ಷಣೆ, ಸೂಕ್ಷ್ಮ ನೀರಾವರಿ, ಮಣ್ಣಿನ ಆರೋಗ್ಯ, ಗುಣಮಟ್ಟದ ಬೀಜಗಳು ಹಾಗೂ ಹವಾಮಾನ ಸ್ನೇಹಿ ಬೆಳೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಯುವಕರು, ಮಹಿಳೆಯರು, ವಿಜ್ಞಾನಿಗಳು ಮತ್ತು ರೈತರ ಸಹಭಾಗಿತ್ವದಿಂದಲೇ 2047ರ ವಿಕ್ಷಿತ್ ಭಾರತ್ ಗುರಿ ಸಾಧಿಸಲು ಸಾಧ್ಯ ಎಂದು ಓಂ ಬಿರ್ಲಾ ಅಭಿಪ್ರಾಯಪಟ್ಟರು.
