ಸೆಮಿಕಂಡಕ್ಟರ್, AI ಕ್ಷೇತ್ರಗಳಲ್ಲಿ ಭಾರತ-ಜಪಾನ್ ಸಹಕಾರಕ್ಕೆ ವೇಗ; CEPA ಪರಿಶೀಲನೆ ತ್ವರಿತ

0
Piyush-Goyal

ಟೋಕಿಯೋ: ಸೆಮಿಕಂಡಕ್ಟರ್‌ಗಳು ಮತ್ತು ಕೃತಕ ಬುದ್ಧಿಮತ್ತೆ (AI) ಸೇರಿದಂತೆ ಕಾರ್ಯತಂತ್ರದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸಲು ಭಾರತ ಮತ್ತು ಜಪಾನ್ ಮುಂದಾಗಿವೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮಂಗಳವಾರ ಟೋಕಿಯೋದಲ್ಲಿ ನಡೆದ ಭಾರತ-ಜಪಾನ್ ಉದ್ಯಮ ದುಂಡುಮೇಜಿನ ಸಭೆಯ ಅಧ್ಯಕ್ಷತೆ ವಹಿಸಿದರು.

ಭಾರತದ ಸೆಮಿಕಂಡಕ್ಟರ್ ಬೇಡಿಕೆ 2032ರ ವೇಳೆಗೆ 150 ಶತಕೋಟಿ ಡಾಲರ್ ತಲುಪುವ ನಿರೀಕ್ಷೆಯಿದೆ ಎಂದು ಗೋಯಲ್ ತಿಳಿಸಿದರು. ಚಿಪ್ ವಿನ್ಯಾಸ, ತಯಾರಿಕೆ, ಪ್ಯಾಕೇಜಿಂಗ್, ಸಂಶೋಧನೆ ಮತ್ತು ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು.

ಸಮಗ್ರ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆ ನಿರ್ಮಿಸಲು ಸೆಮಿಕಾನ್ ಇಂಡಿಯಾ 1.0 ಅಡಿಯಲ್ಲಿ 10 ಶತಕೋಟಿ ಡಾಲರ್ ಹಾಗೂ ಸೆಮಿಕಾನ್ ಇಂಡಿಯಾ 2.0 ಅಡಿಯಲ್ಲಿ ಹೆಚ್ಚುವರಿ 15 ಶತಕೋಟಿ ಡಾಲರ್ ಹೂಡಿಕೆಗೆ ಸರ್ಕಾರ ಒತ್ತು ನೀಡಿದೆ ಎಂದು ಅವರು ವಿವರಿಸಿದರು.

ಟೋಕಿಯೋ ಎಲೆಕ್ಟ್ರಾನ್, ಫ್ಯೂಜಿಫಿಲ್ಮ್, ಕ್ಯೋಸೆರಾ, NEC ಮತ್ತು ROHM ಸೇರಿದಂತೆ ಸುಮಾರು 21 ಪ್ರಮುಖ ಜಪಾನ್ ಕಂಪನಿಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಭಾರತದ ಸೆಮಿಕಂಡಕ್ಟರ್ ಮತ್ತು AI ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಜಪಾನ್ ಸಂಸ್ಥೆಗಳು ಮೇಕ್ ಇನ್ ಇಂಡಿಯಾ, ಡಿಸೈನ್ ಇನ್ ಇಂಡಿಯಾ ಮತ್ತು ಡೆವಲಪ್ ಇನ್ ಇಂಡಿಯಾಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದವು.

ಇದಕ್ಕೂ ಮೊದಲು ಗೋಯಲ್ ಅವರು ಜಪಾನ್‌ನ ಆರ್ಥಿಕತೆ, ವ್ಯಾಪಾರ ಮತ್ತು ಕೈಗಾರಿಕಾ ಸಚಿವ ಅಕಾಜವಾ ರ್ಯೋಸಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಎರಡೂ ದೇಶಗಳ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಪರಿಶೀಲಿಸಿದ ಸಚಿವರು, ಹೊಸ ಅವಕಾಶಗಳಿಗೆ ಅನುಗುಣವಾಗಿ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (CEPA) ಪರಿಶೀಲನೆ ಪ್ರಕ್ರಿಯೆಯನ್ನು ವೇಗಗೊಳಿಸಲು ಒಪ್ಪಿಕೊಂಡರು.

ಉತ್ಪಾದನೆ, ತಂತ್ರಜ್ಞಾನ, ನಾವೀನ್ಯತೆ ಮತ್ತು ಮುಂದಿನ ಪೀಳಿಗೆಯ ಕೈಗಾರಿಕೆಗಳಲ್ಲಿನ ಸಹಕಾರದ ಬಗ್ಗೆಯೂ ಚರ್ಚೆ ನಡೆಯಿತು. ಭಾರತದಲ್ಲಿ ಜಪಾನ್‌ನ 10 ಟ್ರಿಲಿಯನ್ ಯೆನ್ ಖಾಸಗಿ ಹೂಡಿಕೆ ಗುರಿ ಸಾಧಿಸುವತ್ತ ಆಗಿರುವ ಪ್ರಗತಿಯನ್ನೂ ಸಚಿವರು ಪರಿಶೀಲಿಸಿದರು.

Leave a Reply

Your email address will not be published. Required fields are marked *