ವಾಣಿಜ್ಯ LPG ಸಿಲಿಂಡರ್‌ ಬೆಲೆಯಲ್ಲಿ ₹200 ಇಳಿಕೆ, ಹೊಸ ದರ ಜಾರಿ

0
gas-cylinder-1-300x199-1

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು (OMCs) 19 ಕೆಜಿ ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಯನ್ನು ₹200ಕ್ಕೂ ಹೆಚ್ಚು ಇಳಿಕೆ ಮಾಡಿದ್ದು, ಆಗಸ್ಟ್ 1ರಿಂದ ಹೊಸ ದರ ಜಾರಿಗೆ ಬಂದಿದೆ. ಈ ಕ್ರಮದಿಂದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಇತರ ವಾಣಿಜ್ಯ ಬಳಕೆದಾರರಿಗೆ ನಿರಾಳತೆ ಸಿಕ್ಕಿದೆ.

ಹೊಸ ದರದ ಪ್ರಕಾರ, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ LPG ಸಿಲಿಂಡರ್‌ ಬೆಲೆ ₹202 ಹಾಗೂ ಕೋಲ್ಕತ್ತಾದಲ್ಲಿ ₹209 ಇಳಿಕೆಯಾಗಿದೆ. ಕೋಲ್ಕತ್ತಾದಲ್ಲಿ ಪರಿಷ್ಕೃತ ಬೆಲೆ ₹2,872.50 ಆಗಿದೆ. ಆದರೆ, 14.2 ಕೆಜಿ ಗೃಹಬಳಕೆಯ LPG ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಪಶ್ಚಿಮ ಏಷ್ಯಾದ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದ ಜಾಗತಿಕ ಇಂಧನ ಬೆಲೆಗಳಲ್ಲಿ ಏರಿಳಿತ ಉಂಟಾಗಿದ್ದರೂ, ಪೂರೈಕೆ ಪರಿಸ್ಥಿತಿ ಸುಧಾರಿಸಿರುವ ಹಿನ್ನೆಲೆಯಲ್ಲಿ OMCಗಳು ಬೆಲೆ ಇಳಿಕೆ ಮಾಡಿವೆ. ಜುಲೈ 1ರಂದು ಕೂಡ ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಯನ್ನು ₹183.50ರವರೆಗೆ ಇಳಿಸಲಾಗಿತ್ತು.

ಈ ಹಿಂದೆ ಗೃಹಬಳಕೆಗೆ ಆದ್ಯತೆ ನೀಡುವ ಉದ್ದೇಶದಿಂದ ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರಿಗೆ LPG ಪೂರೈಕೆಯಲ್ಲಿ ನಿರ್ಬಂಧ ಹೇರಲಾಗಿತ್ತು. ಬಳಿಕ ಇಂಧನ ಲಭ್ಯತೆ ಸುಧಾರಿಸಿದ ಹಿನ್ನೆಲೆಯಲ್ಲಿ ಪೂರೈಕೆಯನ್ನು ಪುನಃಸ್ಥಾಪಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

Leave a Reply

Your email address will not be published. Required fields are marked *