ರಾಜಮಾರ್ಗಯಾತ್ರ ಆ್ಯಪ್‌ನಲ್ಲಿ ಡಿಜಿಟಲ್ ಲೋಕಲ್ ಪಾಸ್, AI ಸಹಾಯ ಕೇಂದ್ರ ಆರಂಭ

0
bangalore-mysore-expressway-highway-3-300x180-1

ನವದೆಹಲಿ: ಹೆದ್ದಾರಿ ಪ್ರಯಾಣವನ್ನು ಮತ್ತಷ್ಟು ಸುಲಭ ಮತ್ತು ಪಾರದರ್ಶಕಗೊಳಿಸುವ ಉದ್ದೇಶದಿಂದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ರಾಜಮಾರ್ಗಯಾತ್ರ ಮೊಬೈಲ್ ಆ್ಯಪ್‌ನಲ್ಲಿ ಡಿಜಿಟಲ್ ಲೋಕಲ್ ಪಾಸ್ ಹಾಗೂ AI ಆಧಾರಿತ ‘ಮಾರ್ಗಮಿತ್ರ’ ಸಹಾಯ ಕೇಂದ್ರವನ್ನು ಆರಂಭಿಸಿದೆ.

ಡಿಜಿಟಲ್ ಲೋಕಲ್ ಪಾಸ್ ಮೂಲಕ ಅರ್ಹ ವಾಹನ ಸವಾರರು ಟೋಲ್ ಪ್ಲಾಜಾಗೆ ತೆರಳದೆ ಆನ್‌ಲೈನ್‌ನಲ್ಲೇ ಮಾಸಿಕ ಟೋಲ್ ಪಾಸ್ ಪಡೆಯಬಹುದು. ಈ ಸೇವೆಯನ್ನು ಮೊದಲ ಹಂತದಲ್ಲಿ ದೆಹಲಿಯ ಮುಂಡ್ಕಾ–ಬಕ್ಕರ್‌ವಾಲಾ ಟೋಲ್ ಪ್ಲಾಜಾದಲ್ಲಿ ಆರಂಭಿಸಲಾಗಿದ್ದು, ಮುಂದಿನ ತಿಂಗಳುಗಳಲ್ಲಿ ದೇಶದ ಇತರ ಟೋಲ್ ಪ್ಲಾಜಾಗಳಿಗೂ ವಿಸ್ತರಿಸಲಾಗುತ್ತದೆ.

ಟೋಲ್ ಪ್ಲಾಜಾದ 20 ಕಿ.ಮೀ. ವ್ಯಾಪ್ತಿಯಲ್ಲಿ ವಾಸಿಸುವವರು DigiLocker, VAHAN ಮತ್ತು FASTag ಪರಿಶೀಲನೆ ಮೂಲಕ ಒಂದು ತಿಂಗಳ ಅವಧಿಗೆ ಅನಿಯಮಿತ ಸಂಚಾರದ ಡಿಜಿಟಲ್ ಪಾಸ್ ಪಡೆಯಬಹುದಾಗಿದೆ.

ಇದೇ ವೇಳೆ, ಮಾರ್ಗಮಿತ್ರ ಸಹಾಯ ಕೇಂದ್ರವು 22 ಭಾರತೀಯ ಭಾಷೆಗಳಲ್ಲಿ ಪಠ್ಯ ಹಾಗೂ ಧ್ವನಿ ಮೂಲಕ ಸೇವೆ ನೀಡಲಿದ್ದು, FASTag ರೀಚಾರ್ಜ್, KYC, ಮರುಪಾವತಿ, ಸ್ಥಳೀಯ ಹಾಗೂ ವಾರ್ಷಿಕ ಪಾಸ್ ಮಾಹಿತಿ, ದೂರು ದಾಖಲಿಕೆ ಮತ್ತು ಅದರ ಸ್ಥಿತಿ ಪರಿಶೀಲನೆ ಸೇರಿದಂತೆ ವಿವಿಧ ಸೇವೆಗಳನ್ನು ಒದಗಿಸುತ್ತದೆ. ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳನ್ನೂ ಈ ವೇದಿಕೆಯ ಮೂಲಕ ವರದಿ ಮಾಡಬಹುದು.

NHAI ಪ್ರಕಾರ, ರಾಜಮಾರ್ಗಯಾತ್ರ ಆ್ಯಪ್ ಮೂಲಕ ಈಗಾಗಲೇ 80 ಲಕ್ಷಕ್ಕೂ ಹೆಚ್ಚು ವಾರ್ಷಿಕ ಪಾಸ್‌ಗಳು ವಿತರಿಸಲಾಗಿದ್ದು, ಹೊಸ ಸೇವೆಗಳು ಡಿಜಿಟಲ್ ಹೆದ್ದಾರಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಗುರಿ ಹೊಂದಿವೆ. ಈ ಕ್ರಮಗಳು ಡಿಜಿಟಲ್ ಇಂಡಿಯಾ ಮತ್ತು ಸುಲಭ ಜೀವನ ಉಪಕ್ರಮಗಳ ಭಾಗವಾಗಿವೆ.

Leave a Reply

Your email address will not be published. Required fields are marked *