ಮೊದಲ ವಾರದಲ್ಲೇ ₹300 ಕೋಟಿ ಕ್ಲಬ್ ಸೇರಿದ ‘ಟಾಕ್ಸಿಕ್’; ₹400 ಕೋಟಿ ಗುರಿಯತ್ತ ಯಶ್ ಚಿತ್ರ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯಾಗಿ ಒಂದು ವಾರ ಪೂರ್ಣಗೊಳಿಸಿದ್ದು, ಮಿಶ್ರ ಪ್ರತಿಕ್ರಿಯೆಯ ನಡುವೆಯೂ ವಿಶ್ವದಾದ್ಯಂತ ₹315 ಕೋಟಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ₹300 ಕೋಟಿ ಕ್ಲಬ್ ಸೇರಿದೆ.
ಚಿತ್ರ ಮೊದಲ ದಿನವೇ ಭಾರತದಲ್ಲಿ ₹101.10 ಕೋಟಿ ನೆಟ್ ಗಳಿಸುವ ಮೂಲಕ ಭರ್ಜರಿ ಆರಂಭ ಕಂಡಿತ್ತು. ಬಳಿಕ ಗಳಿಕೆಯಲ್ಲಿ ಇಳಿಕೆ ಕಂಡುಬಂದಿದೆ. ಮೊದಲ ದಿನ ₹101.10 ಕೋಟಿ, ಎರಡನೇ ದಿನ ₹37.65 ಕೋಟಿ, ಮೂರನೇ ದಿನ ₹27.20 ಕೋಟಿ, ನಾಲ್ಕನೇ ದಿನ ₹25.15 ಕೋಟಿ ಹಾಗೂ ಐದನೇ ದಿನ ₹23 ಕೋಟಿ ನೆಟ್ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.

ಏಳು ದಿನಗಳಲ್ಲಿ ಭಾರತದಲ್ಲಿ ಚಿತ್ರದ ಒಟ್ಟು ನೆಟ್ ಗಳಿಕೆ ₹229.60 ಕೋಟಿಗೆ ತಲುಪಿದೆ. ಭಾರತದ ಗ್ರಾಸ್ ಕಲೆಕ್ಷನ್ ₹274.25 ಕೋಟಿ ಎಂದು ಅಂದಾಜಿಸಲಾಗಿದೆ.
ವಿದೇಶಿ ಮಾರುಕಟ್ಟೆಯಲ್ಲೂ ‘ಟಾಕ್ಸಿಕ್’ ಉತ್ತಮ ಗಳಿಕೆ ದಾಖಲಿಸಿದ್ದು, ಇದುವರೆಗೆ ₹40.75 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಭಾರತ ಮತ್ತು ವಿದೇಶಿ ಮಾರುಕಟ್ಟೆಯ ಗಳಿಕೆ ಸೇರಿ ಮೊದಲ ವಾರದಲ್ಲಿ ವಿಶ್ವದಾದ್ಯಂತ ₹315 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿರುವ ಚಿತ್ರ, ₹300 ಕೋಟಿ ಮೈಲಿಗಲ್ಲು ದಾಟಿದೆ.
ಇದೇ ರೀತಿ ಮುಂದುವರಿದರೆ ‘ಟಾಕ್ಸಿಕ್’ ಒಟ್ಟಾರೆ ₹400 ಕೋಟಿ ಗ್ರಾಸ್ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
