bjp flag1

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಮಾಡಿದ ಬೆಲೆ ಏರಿಕೆಯ ವಿರುದ್ಧ ಬೆಂಗಳೂರಿನಲ್ಲಿ ಬಿಜೆಪಿ ಹೋರಾಟ ಮಾಡಲಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ತಿಳಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ವಲಯ ಆಯುಕ್ತರ ಕಚೇರಿಯ ಮುಂದೆ ಏಪ್ರಿಲ್‌ 28 ರಿಂದ ಮೂರು ದಿನಗಳ ಕಾಲ ಹೋರಾಟ ಮಾಡಲಾಗುತ್ತದೆ. ಹಾಲು, ವಿದ್ಯುತ್‌ ಹಾಗೂ ಆಸ್ತಿ ತೆರಿಗೆ ಹಾಗೂ ಪಾರ್ಕಿಂಗ್‌ ಶುಲ್ಕದ ಬಗ್ಗೆ ಹೋರಾಟ ಮಾಡಲಾಗುವುದು. ಬೆಂಗಳೂರಿನ ಜನರ ಮೇಲೆ ಕಾಂಗ್ರೆಸ್‌ ಭರಪೂರ ತೆರಿಗೆಗಳನ್ನು ಹೇರಿದೆ. ಪ್ರತಿ ಮನೆಗಳಿಗೆ ಹೋಗಿ ಕರಪತ್ರ ಹಂಚಲಾಗುವುದು. ಬಿಬಿಎಂಪಿ ಚುನಾವಣೆಯನ್ನು ಸರ್ಕಾರ ಮುಂದೂಡುತ್ತಿದೆ. ಈ ಬಗ್ಗೆ ಕೂಡ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಶಾಸಕರ ಅಮಾನತಿಗೆ ಸಂಬಂಧಿಸಿದಂತೆ ಸ್ಪೀಕರ್‌ ಜೊತೆ ಚರ್ಚಿಸಲಾಗಿದೆ. ಈ ಅಮಾನತು ಆ ಒಂದು ಅಧಿವೇಶನಕ್ಕೆ ಮಾತ್ರ ಸೀಮಿತವಾಗಬೇಕು. ಅದನ್ನು ಬಿಟ್ಟು ಹೊರಗೆ ಭತ್ಯೆ ಕೊಡುವುದಿಲ್ಲ ಎನ್ನುವುದು ಸರಿಯಲ್ಲ. ಇದು ಅಸಂವಿಧಾನಿಕವಾದ ಕ್ರಮ ಎಂದರು.

ಗ್ರೇಟರ್‌ ಬೆಂಗಳೂರು ವಿಧೇಯಕದ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು. ರಾಜ್ಯಪಾಲರು ಸಹಿ ಹಾಕಿದರೆ ಅದು ಕಾಂಗ್ರೆಸ್‌ ಪರ ಎನ್ನುತ್ತಾರೆ, ಸಹಿ ಹಾಕದೇ ಇದ್ದರೆ ಅದು ಬಿಜೆಪಿ ಕಚೇರಿ ಎಂದು ಟೀಕಿಸುತ್ತಾರೆ ಎಂದರು.

ಕೆಎಎಸ್‌ ಪರೀಕ್ಷೆಗೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ನೀಡಿದೆ. ಅಧಿವೇಶನದಲ್ಲಿ ನಾನು ಈ ವಿಷಯ ಪ್ರಸ್ತಾಪಿಸಿದಾಗ ತೀರ್ಪು ಬಂದ ಮೇಲೆ ಮರು ಪರೀಕ್ಷೆ ಬಗ್ಗೆ ಮುಕ್ತ ಮನಸ್ಸಿನಿಂದ ಪರಿಶೀಲನೆ ನಡೆಸುವುದಾಗಿ ಸಿಎಂ ಭರವಸೆ ನೀಡಿದ್ದರು. ಈಗ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಗಮನಿಸಿ ಮುಂದೆ ಅಗತ್ಯಬಿದ್ದರೆ ಮುಂದೆಯೂ ಹೋರಾಟ ಮಾಡಲಾಗುವುದು ಎಂದರು.

Leave a Reply

Your email address will not be published. Required fields are marked *