ಬುದ್ಗಾಮ್ನಲ್ಲಿ ಸೇನಾ ಕಾರ್ಯಾಚರಣೆ: ಲಷ್ಕರ್ ಮೋಸ್ಟ್ ವಾಂಟೆಡ್ ಉಗ್ರ ‘ಮೂಸಾ’ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್-ಇ-ತೊಯ್ಬಾ (LeT) ಸಂಘಟನೆಗೆ ಸೇರಿದ ಮೋಸ್ಟ್ ವಾಂಟೆಡ್ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿನಾರ್ ಕಾರ್ಪ್ಸ್ ಹತ್ಯೆಗೀಡಾದ ಉಗ್ರನ ಗುರುತನ್ನು ಅಧಿಕೃತವಾಗಿ ಬಹಿರಂಗಪಡಿಸದಿದ್ದರೂ, ಅಧಿಕಾರಿಗಳ ಪ್ರಕಾರ ಆತನನ್ನು ಕಾಶ್ಮೀರ ಮೂಲದ ಸುಲೇಮಾನ್ ಶಾ ಅಲಿಯಾಸ್ ‘ಮೂಸಾ’ ಎಂದು ಗುರುತಿಸಲಾಗಿದೆ.

ಇತ್ತೀಚೆಗೆ ಯೂಸ್ಮಾರ್ಗ್ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಿಂದ ಮೂಸಾ ತಪ್ಪಿಸಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಲವು ವರ್ಷಗಳಿಂದ ಪೀರ್ ಪಂಜಾಲ್ ಪರ್ವತ ಶ್ರೇಣಿಯ ಎರಡೂ ಬದಿಗಳಲ್ಲಿ ನಡೆದ ಹಲವು ದಾಳಿಗಳಲ್ಲಿ ಭಾಗಿಯಾಗಿದ್ದ ಆರೋಪದ ಹಿನ್ನೆಲೆಯಲ್ಲಿ ಆತ ಭದ್ರತಾ ಪಡೆಗಳಿಗೆ ಬೇಕಾಗಿದ್ದ ಎಂದು ಅವರು ಹೇಳಿದ್ದಾರೆ.
ಮಧ್ಯ ಕಾಶ್ಮೀರದ ಯೂಸ್ಮಾರ್ಗ್ನ ಕೊರಾಗ್ ಪ್ರದೇಶದಲ್ಲಿ ಸೇನೆ ಹಾಗೂ ಇತರ ಭದ್ರತಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿದ್ದವು. ಕಾರ್ಯಾಚರಣೆ ವೇಳೆ ಅನುಮಾನಾಸ್ಪದ ಚಟುವಟಿಕೆ ಗಮನಿಸಿದ ಭದ್ರತಾ ಪಡೆಗಳು ಉಗ್ರರಿಗೆ ಶರಣಾಗುವಂತೆ ಸೂಚಿಸಿದಾಗ, ಅವರು ಗುಂಡಿನ ದಾಳಿ ನಡೆಸಿದರು ಎಂದು ಸೇನೆ ತಿಳಿಸಿದೆ.
ಇದಕ್ಕೆ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದ್ದು, ತೀವ್ರ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಓರ್ವ ಉಗ್ರ ಹತನಾಗಿದ್ದಾನೆ ಎಂದು ಸೇನೆ ತಿಳಿಸಿದೆ.
