ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ. 3ರಷ್ಟು ಹೆಚ್ಚಳ; ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ಜಾರಿ

0
Central-Vista-New-Parliament-Building-750x408-1-2

ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ (DA) ಹಾಗೂ ಪಿಂಚಣಿದಾರರ ತುಟ್ಟಿ ಪರಿಹಾರವನ್ನು (DR) ಶೇ. 3ರಷ್ಟು ಹೆಚ್ಚಿಸುವ ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಹೆಚ್ಚಳವು 2026ರ ಜುಲೈ 1ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ.

ಈ ಪರಿಷ್ಕರಣೆಯೊಂದಿಗೆ ಕೇಂದ್ರ ಸರ್ಕಾರಿ ನೌಕರರ ಮೂಲ ವೇತನದ ಮೇಲಿನ ತುಟ್ಟಿಭತ್ಯೆ ಹಾಗೂ ಪಿಂಚಣಿದಾರರ ತುಟ್ಟಿ ಪರಿಹಾರವು ಶೇ. 60ರಿಂದ ಶೇ. 63ಕ್ಕೆ ಏರಿಕೆಯಾಗಲಿದೆ. ಬೆಲೆ ಏರಿಕೆಯಿಂದ ಉಂಟಾಗುವ ಆರ್ಥಿಕ ಒತ್ತಡವನ್ನು ತಗ್ಗಿಸಲು ಈ ನಿರ್ಧಾರ ನೆರವಾಗಲಿದೆ ಎಂದು ಸರ್ಕಾರ ತಿಳಿಸಿದೆ.

ಈ ನಿರ್ಧಾರದಿಂದ ಸುಮಾರು 48.54 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.71 ಲಕ್ಷ ಪಿಂಚಣಿದಾರರು ಸೇರಿದಂತೆ ಒಟ್ಟು 1.17 ಕೋಟಿಗೂ ಹೆಚ್ಚು ಮಂದಿಗೆ ಪ್ರಯೋಜನವಾಗುವ ನಿರೀಕ್ಷೆಯಿದೆ.

ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರದ ಹೆಚ್ಚಳದಿಂದ ಸರ್ಕಾರಿ ಬೊಕ್ಕಸದ ಮೇಲೆ ವಾರ್ಷಿಕವಾಗಿ ಸುಮಾರು ₹10,016.10 ಕೋಟಿ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ.

7ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಅಂಗೀಕರಿಸಲಾದ ಸೂತ್ರಕ್ಕೆ ಅನುಗುಣವಾಗಿ ಈ ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ. ಹಣದುಬ್ಬರದಿಂದಾಗಿ ದಿನನಿತ್ಯದ ಜೀವನಾವಶ್ಯಕ ವಸ್ತುಗಳು ಮತ್ತು ಮನೆಯ ಖರ್ಚುಗಳಲ್ಲಿ ಉಂಟಾಗುವ ಹೆಚ್ಚುವರಿ ಹೊರೆಯನ್ನು ನಿಭಾಯಿಸಲು ನೌಕರರು ಹಾಗೂ ಪಿಂಚಣಿದಾರರಿಗೆ ನೆರವು ನೀಡುವುದು ಇದರ ಉದ್ದೇಶವಾಗಿದೆ.

ಜುಲೈ 1ರಿಂದ ಹೆಚ್ಚಳ ಅನ್ವಯವಾಗುವುದರಿಂದ, ಪರಿಷ್ಕೃತ ದರದಂತೆ ಬಾಕಿ ಮೊತ್ತ ಪಾವತಿಸುವ ವಿಚಾರವೂ ಸಂಬಂಧಿತ ಜಾರಿ ಆದೇಶಗಳ ಪ್ರಕಾರ ನಿರ್ಧಾರವಾಗಲಿದೆ.

Leave a Reply

Your email address will not be published. Required fields are marked *