ಕೇಂದ್ರ ಬಜೆಟ್: ಕರ್ನಾಟಕಕ್ಕೂ ರೈಲ್ವೆ ಹೈಸ್ಪೀಡ್ ಕಾರಿಡಾರ್ ಘೋಷಣೆ

0
Train - Railway Track

ನವದೆಹಲಿ: ಕೇಂದ್ರ ಬಜೆಟ್‌ದಲ್ಲಿ ಮೂಲಸೌಕರ್ಯ ವಿಕಸನಕ್ಕೆ ಒತ್ತು ನೀಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರೈಲ್ವೆ ವಲಯದಲ್ಲಿಯೂ ಮಹತ್ವದ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಏಳು ಹೈಸ್ಪೀಡ್ ರೈಲ್ವೆ ಕಾರಿಡಾರ್‌ಗಳನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಅವರು ಬಜೆಟ್ ಭಾಷಣದಲ್ಲಿ ಮಂಡಿಸಿದರು.

ಚೆನ್ನೈ–ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಆರ್ಥಿಕ ಮತ್ತು ವಾಣಿಜ್ಯ ಕೇಂದ್ರಗಳನ್ನು ಜೋಡಿಸುವ ಹೈಸ್ಪೀಡ್ ರೈಲು ಮಾರ್ಗಗಳು ಅಭಿವೃದ್ಧಿಯಾಗಲಿವೆ. ಮುಂಬೈ–ಪುಣೆ, ಪುಣೆ–ಹೈದರಾಬಾದ್, ಹೈದರಾಬಾದ್–ಚೆನ್ನೈ, ಬೆಂಗಳೂರು–ಹೈದರಾಬಾದ್, ಬೆಂಗಳೂರು–ಚೆನ್ನೈ, ದೆಹಲಿ–ವಾರಣಾಸಿ ಹಾಗೂ ವಾರಣಾಸಿ–ಸಿಲಿಗುರಿ ನಡುವೆ ಈ ವೇಗದ ರೈಲು ಕಾರಿಡಾರ್‌ಗಳನ್ನು ನಿರ್ಮಿಸಲಾಗುವುದು ಎಂದು ಸಚಿವೆ ವಿವರಿಸಿದರು.

ಈ ಹೈಸ್ಪೀಡ್ ರೈಲ್ವೆ ಯೋಜನೆಗಳ ಮೂಲಕ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವುದರ ಜೊತೆಗೆ, ಸರಕು ಮತ್ತು ಪ್ರಯಾಣಿಕರ ಸಂಚಾರಕ್ಕೆ ಹೊಸ ದಿಕ್ಕು ನೀಡುವ ಉದ್ದೇಶ ಸರ್ಕಾರದದ್ದಾಗಿದೆ. ಇದರ ಪರಿಣಾಮವಾಗಿ ವ್ಯಾಪಾರ, ಕೈಗಾರಿಕೆ ಹಾಗೂ ಸೇವಾ ವಲಯಗಳಲ್ಲಿ ಚಟುವಟಿಕೆಗಳು ವೇಗ ಪಡೆಯಲಿವೆ ಎಂದು ಅವರು ಹೇಳಿದರು.

ಹೈಸ್ಪೀಡ್ ಕಾರಿಡಾರ್‌ಗಳ ಸ್ಥಾಪನೆಯಿಂದ ಉದ್ಯೋಗಾವಕಾಶಗಳು ಹೆಚ್ಚಲಿದ್ದು, ಮಹಾನಗರಗಳು ಮತ್ತು ಪ್ರಮುಖ ಆರ್ಥಿಕ ಕೇಂದ್ರಗಳ ನಡುವಿನ ಸಂಪರ್ಕ ಇನ್ನಷ್ಟು ಬಲಪಡಲಿದೆ. ದೇಶದ ಆರ್ಥಿಕ ವೃದ್ಧಿಗೆ ರೈಲ್ವೆ ವಲಯ ಪ್ರಮುಖ ಪಾತ್ರ ವಹಿಸಲಿದೆ ಎಂಬ ವಿಶ್ವಾಸವನ್ನು ಹಣಕಾಸು ಸಚಿವೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *