‘ಕೆಪಿಎಸ್ಸಿ ಅಕ್ರಮದ ಜಾತಕ ಜಾಲಾಡಿದರೆ ಕುಮಾರಸ್ವಾಮಿ ಕುಂಡಲಿಯೇ ಕಾಣುತ್ತದೆ’: ಪ್ರಿಯಾಂಕ್ ಖರ್ಗೆ

0
Priyank-Kharge

ಬೆಂಗಳೂರು: ಕೆಪಿಎಸ್ಸಿ ನೇಮಕಾತಿ ಅಕ್ರಮದ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಕೆಪಿಎಸ್ಸಿ ವಿಚಾರದಲ್ಲಿ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳಿಗೆ ಕುಮಾರಸ್ವಾಮಿ ಅವರು ತಾರ್ಕಿಕ ಉತ್ತರ ನೀಡುವ ಬದಲು ಪತ್ರಿಕಾಗೋಷ್ಠಿ ನಡೆಸಿ ಪಲಾಯನ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ವ್ಯಾಪಕ ಅಕ್ರಮ ನಡೆದಿರುವುದಾಗಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ, ಅಂದಿನ ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ನೇಮಕ ಮಾಡುವಂತೆ ದೇವೇಗೌಡ ಮತ್ತು ಕುಮಾರಸ್ವಾಮಿ ಶಿಫಾರಸು ಪತ್ರ ನೀಡಿದ್ದರು ಎಂದು ಖರ್ಗೆ ಆರೋಪಿಸಿದ್ದಾರೆ.

‘‘ಅಕ್ರಮದ ಆರೋಪಗಳಿದ್ದ ಆಯ್ಕೆಗೆ ಶಿಫಾರಸು ಮಾಡುವ ಹಿಂದೆ ಕುಮಾರಸ್ವಾಮಿ ಅವರ ಹಿತಾಸಕ್ತಿ ಏನಿತ್ತು? ನ್ಯಾಯಾಲಯವೇ ಅಕ್ರಮವನ್ನು ಗುರುತಿಸಿದ್ದರೂ ಕ್ಲೀನ್‌ಚಿಟ್ ನೀಡಿ ಶಿಫಾರಸು ಮಾಡಿದ್ದೇಕೆ?’’ ಎಂದು ಪ್ರಶ್ನಿಸಿದ್ದಾರೆ.

‘ಜೈಲಿನಲ್ಲಿದ್ದ ಕೆಪಿಎಸ್ಸಿ ಅಧ್ಯಕ್ಷರನ್ನು ಭೇಟಿಯಾಗಿದ್ದೇಕೆ?’

ಸಂಬಂಧಿಕ ಅಧಿಕಾರಿಗಳ ನೇಮಕಾತಿ ರದ್ದಾದ ಬಳಿಕವೂ ನ್ಯಾಯಮಂಡಳಿಯಿಂದ ತಡೆಯಾಜ್ಞೆ ತಂದು ಐಎಎಸ್‌ಗೆ ಬಡ್ತಿ ನೀಡಿ ಮುಂದುವರಿಸಿದ್ದರ ಬಗ್ಗೆ ಕುಮಾರಸ್ವಾಮಿ ಏಕೆ ಮಾತನಾಡುತ್ತಿಲ್ಲ ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಅಕ್ರಮದ ಪ್ರಕರಣದಲ್ಲಿ ಜೈಲು ಸೇರಿದ್ದ ಹಿಂದಿನ ಕೆಪಿಎಸ್ಸಿ ಅಧ್ಯಕ್ಷರೊಬ್ಬರನ್ನು ಕುಮಾರಸ್ವಾಮಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೇಟಿಯಾಗಿದ್ದ ವಿಚಾರವೂ ಜಗತ್ತಿಗೆ ತಿಳಿದಿಲ್ಲ ಎಂದುಕೊಂಡಿದ್ದಾರೆಯೇ ಎಂದು ಪ್ರಶ್ನಿಸಿರುವ ಅವರು, ‘‘ಜೈಲಿಗೆ ಹೋಗಿ ಭೇಟಿಯಾಗುವಂತಹದ್ದೇನಿತ್ತು? ತಮ್ಮ ಹೆಸರು ಹೊರಬರದಂತೆ ಮನವಿ ಮಾಡುವುದಕ್ಕಾ, ಬೆದರಿಕೆ ಹಾಕುವುದಕ್ಕಾ?’’ ಎಂದು ವ್ಯಂಗ್ಯವಾಡಿದ್ದಾರೆ.

‘‘ಕೆಪಿಎಸ್ಸಿಯ ಅಕ್ರಮದ ಜಾತಕ ಜಾಲಾಡಿದರೆ ಎಲ್ಲೆಲ್ಲೂ ನಿಮ್ಮ ಕುಂಡಲಿ, ನಕ್ಷತ್ರಗಳೇ ಕಾಣಸಿಗುತ್ತವೆ’’ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ನೇಮಕಾತಿಗೆ ಶಿಫಾರಸು ಮಾಡಿದವರು RDPR ಇಲಾಖೆಯ ನೇಮಕಾತಿಯನ್ನು ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದ ಎಂದು ಅವರು ಟೀಕಿಸಿದ್ದಾರೆ.

Leave a Reply

Your email address will not be published. Required fields are marked *