ಕುಮಾರಸ್ವಾಮಿಯನ್ನು ಹರಕೆ ಕುರಿ ಮಾಡುತ್ತಿರುವ ಬಿಜೆಪಿ: ಬಿ.ಕೆ. ಹರಿಪ್ರಸಾದ್ ಟೀಕೆ

0
BKHariprasaad-KPCC-300x188-2

ಬೆಂಗಳೂರು: ಬಿಜೆಪಿ ನಾಯಕರು ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ದೇಶದ ವಿವಿಧ ರಾಜ್ಯಗಳಲ್ಲಿ ಮಿತ್ರಪಕ್ಷಗಳನ್ನು ದುರ್ಬಲಗೊಳಿಸಿರುವ ಬಿಜೆಪಿ, ಈಗ ಕರ್ನಾಟಕದಲ್ಲೂ ಅದೇ ರಾಜಕೀಯ ತಂತ್ರ ಅನುಸರಿಸುತ್ತಿದೆ. ಪ್ರಹ್ಲಾದ್ ಜೋಶಿ ಅವರು ಕುಮಾರಸ್ವಾಮಿ ಅವರನ್ನು ಹರಕೆ ಕುರಿಯಂತೆ ಬಳಸಿಕೊಳ್ಳುತ್ತಿದ್ದಾರೆ” ಎಂದು ಟೀಕಿಸಿದರು.

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಕುರಿತು ಬಿಜೆಪಿ ಮಾಡುತ್ತಿರುವ ಆರೋಪಗಳನ್ನು ತಳ್ಳಿಹಾಕಿದ ಹರಿಪ್ರಸಾದ್, ಚುನಾವಣಾ ಆಯೋಗದ ನಿಯಮಾನುಸಾರ ಸಮುದಾಯ ಭವನ, ಮಸೀದಿ, ದೇವಾಲಯ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಗಣತಿ ನಮೂನೆಗಳನ್ನು ಭರ್ತಿ ಮಾಡಬಹುದಾಗಿದೆ ಎಂದು ಸ್ಪಷ್ಟಪಡಿಸಿದರು. ಪ್ರಕ್ರಿಯೆಯಲ್ಲಿ ಲೋಪಗಳಿದ್ದರೆ ಅದನ್ನು ಚುನಾವಣಾ ಆಯೋಗವೇ ಪರಿಶೀಲಿಸಲಿದೆ ಎಂದರು.

ರಾಜ್ಯದಲ್ಲಿ 50 ಲಕ್ಷ ಮತದಾರರನ್ನು ಮತಪಟ್ಟಿಯಿಂದ ಕೈಬಿಡುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪ ಮಾಡಿರುವ ಅವರು, ನೈಜ ಮತದಾರರ ಹಕ್ಕು ಕಸಿಯಬಾರದು ಎಂಬುದು ಕಾಂಗ್ರೆಸ್‌ನ ನಿಲುವು ಎಂದು ಹೇಳಿದರು. ನಕಲಿ, ಮೃತಪಟ್ಟ ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವ ಮತದಾರರನ್ನು ಮಾತ್ರ ಕೈಬಿಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ ಅವರು, “ಪ್ರಜಾಪ್ರಭುತ್ವದಲ್ಲಿ ನೇರವಾಗಿ ಜನಬೆಂಬಲ ಪಡೆಯಲು ಸಾಧ್ಯವಾಗದೆ ಬಿಜೆಪಿ ವಿವಿಧ ತಂತ್ರಗಳನ್ನು ಅನುಸರಿಸುತ್ತಿದೆ” ಎಂದು ಆರೋಪಿಸಿದರು. ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕೊಡುಗೆ ಏನು ಎಂಬುದನ್ನು ಜನರಿಗೆ ವಿವರಿಸಬೇಕು ಎಂದು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್, ಹಿರಿಯ ಉಪಾಧ್ಯಕ್ಷ ವಿ.ಆರ್. ಸುದರ್ಶನ್, ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *