ಆಹಾರ ಭದ್ರತಾ ಕಾಯ್ದೆ ತಿದ್ದುಪಡಿಗೆ ತಮಿಳುನಾಡು ಸಿಎಂ ವಿಜಯ್ ಆಗ್ರಹ, ಪ್ರಧಾನಿಗೆ ಪತ್ರ

ಚೆನ್ನೈ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA)-2013ಕ್ಕೆ ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳಬೇಕು ಅಥವಾ ಮರುಪರಿಶೀಲಿಸಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಪ್ರಸ್ತಾವಿತ ತಿದ್ದುಪಡಿಯಿಂದ ರಾಜ್ಯದ ಸುಮಾರು 70 ಲಕ್ಷ ಬಡ ಫಲಾನುಭವಿಗಳ ಆಹಾರ ಧಾನ್ಯ ಹಕ್ಕು ಕಡಿಮೆಯಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಅಂತ್ಯೋದಯ ಅನ್ನ ಯೋಜನೆ (AAY) ಅಡಿಯಲ್ಲಿ ಪ್ರತಿ ಕುಟುಂಬಕ್ಕೆ ತಿಂಗಳಿಗೆ 35 ಕೆ.ಜಿ. ಆಹಾರ ಧಾನ್ಯ ನೀಡಲಾಗುತ್ತಿದೆ. ಆದರೆ ಹೊಸ ತಿದ್ದುಪಡಿ ಪ್ರಕಾರ ಪ್ರತಿ ವ್ಯಕ್ತಿಗೆ 7 ಕೆ.ಜಿ. ಆಹಾರ ಧಾನ್ಯ ನೀಡಲಾಗುತ್ತಿದ್ದು, ಗರಿಷ್ಠ ಮಿತಿ 35 ಕೆ.ಜಿಯಾಗಿರಲಿದೆ. ಇದರಿಂದ ಸಣ್ಣ ಕುಟುಂಬಗಳನ್ನು ಹೊಂದಿರುವ ತಮಿಳುನಾಡಿನಂತಹ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂದು ವಿಜಯ್ ಹೇಳಿದ್ದಾರೆ.

ರಾಜ್ಯದಲ್ಲಿ 18.64 ಲಕ್ಷ AAY ಪಡಿತರ ಚೀಟಿಗಳಿದ್ದು, 69.27 ಲಕ್ಷ ಫಲಾನುಭವಿಗಳು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ತಿದ್ದುಪಡಿ ಜಾರಿಯಾದರೆ ರಾಜ್ಯಕ್ಕೆ ದೊರೆಯುವ ಆಹಾರ ಧಾನ್ಯ ಹಂಚಿಕೆ ತಿಂಗಳಿಗೆ 65,261 ಮೆಟ್ರಿಕ್ ಟನ್ನಿಂದ 42,040 ಮೆಟ್ರಿಕ್ ಟನ್ಗೆ ಇಳಿಯಲಿದೆ ಎಂದು ಅವರು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಅಕ್ಕಿಯೇ ಪ್ರಮುಖ ಆಹಾರವಾಗಿದ್ದು, ಸಬ್ಸಿಡಿ ಅಕ್ಕಿಯ ಪ್ರಮಾಣ ಕಡಿಮೆಯಾದರೆ ಬಡ ಕುಟುಂಬಗಳ ಆರ್ಥಿಕ ಹೊರೆ ಹೆಚ್ಚುವ ಜೊತೆಗೆ ಹಸಿವು ಮತ್ತು ಅಪೌಷ್ಟಿಕತೆಯ ಅಪಾಯವೂ ಹೆಚ್ಚಲಿದೆ ಎಂದು ಎಚ್ಚರಿಸಿರುವ ಮುಖ್ಯಮಂತ್ರಿ, 2013ರಿಂದ ಜಾರಿಯಲ್ಲಿರುವಂತೆ ಪ್ರತಿ AAY ಕುಟುಂಬಕ್ಕೆ ತಿಂಗಳಿಗೆ 35 ಕೆ.ಜಿ. ಆಹಾರ ಧಾನ್ಯ ನೀಡುವ ವ್ಯವಸ್ಥೆಯನ್ನು ಮುಂದುವರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
