ಅಮರಾವತಿಯಲ್ಲಿ ₹1,235 ಕೋಟಿ ಕೇಂದ್ರ ಸರ್ಕಾರಿ ವಸತಿ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ (CCEA) ಆಂಧ್ರಪ್ರದೇಶದ ರಾಜಧಾನಿ ಅಮರಾವತಿಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗಾಗಿ ₹1,234.91 ಕೋಟಿ ವೆಚ್ಚದ ವಸತಿ ಯೋಜನೆಗೆ ಅನುಮೋದನೆ ನೀಡಿದೆ.
17 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಈ ಜನರಲ್ ಪೂಲ್ ರೆಸಿಡೆನ್ಶಿಯಲ್ ಅಕಾಡಮಿಡೇಶನ್ (GPRA) ಸಂಕೀರ್ಣದಲ್ಲಿ 1,504 ವಸತಿ ಘಟಕಗಳು ನಿರ್ಮಾಣವಾಗಲಿದ್ದು, ಟೈಪ್-II ರಿಂದ ಟೈಪ್-VI ವರ್ಗದ ಮನೆಗಳು ಲಭ್ಯವಾಗಲಿವೆ. ಒಟ್ಟು 11 ವಸತಿ ಗೋಪುರಗಳನ್ನು ನಿರ್ಮಿಸಲಾಗುತ್ತದೆ.
ಸುಮಾರು 31.3 ಲಕ್ಷ ಚದರ ಅಡಿ ವಿಸ್ತೀರ್ಣದ ಈ ಯೋಜನೆಯಲ್ಲಿ 2,000 ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಬ್ಯಾಂಕ್, ಎಟಿಎಂ, ಅಂಚೆ ಕಚೇರಿ, ಶಿಶುವಿಹಾರ, ಸಮುದಾಯ ಭವನ, ಆಹಾರ ಮತ್ತು ಶಾಪಿಂಗ್ ಸಂಕೀರ್ಣ, ಸೇವಾ ಕೇಂದ್ರ ಹಾಗೂ ಅತಿಥಿ ಗೃಹ ಸೇರಿದಂತೆ ವಿವಿಧ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ.
ಕೇಂದ್ರ ಸರ್ಕಾರಿ ನೌಕರರಿಗೆ ಗುಣಮಟ್ಟದ ವಸತಿ ಸೌಲಭ್ಯ ಒದಗಿಸಿ, ಕೆಲಸದ ಸ್ಥಳದ ಸಮೀಪದಲ್ಲೇ ವಾಸಿಸಲು ಅನುಕೂಲ ಕಲ್ಪಿಸುವ ಮೂಲಕ ಆಡಳಿತಾತ್ಮಕ ದಕ್ಷತೆ ಹೆಚ್ಚಿಸುವುದು ಯೋಜನೆಯ ಉದ್ದೇಶವಾಗಿದೆ.

ಯೋಜನೆಯನ್ನು ಹಸಿರು ಕಟ್ಟಡ ಮಾನದಂಡಗಳಿಗೆ ಅನುಗುಣವಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಕನಿಷ್ಠ ನಾಲ್ಕು-ನಕ್ಷತ್ರ GRIHA ರೇಟಿಂಗ್ ಗುರಿಯಾಗಿರಲಿದೆ. ಇಂಧನ ಉಳಿತಾಯ, ಜಲ ಸಂರಕ್ಷಣೆ ಮತ್ತು ಪರಿಸರ ಸ್ನೇಹಿ ನಿರ್ಮಾಣ ಕ್ರಮಗಳಿಗೆ ವಿಶೇಷ ಒತ್ತು ನೀಡಲಾಗುತ್ತದೆ.
ನಿರ್ಮಾಣ ಹಂತದಲ್ಲಿ ವಾರ್ಷಿಕ ಸುಮಾರು 7 ಲಕ್ಷ ಮಾನವ ದಿನಗಳ ಉದ್ಯೋಗ ಮತ್ತು ಯೋಜನೆ ಪೂರ್ಣಗೊಂಡ ಬಳಿಕ ಪ್ರತಿ ವರ್ಷ ಸುಮಾರು 50 ಸಾವಿರ ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ. ಯೋಜನೆಯನ್ನು ಕೇಂದ್ರ ಲೋಕೋಪಯೋಗಿ ಇಲಾಖೆ (CPWD) ಮೂಲಕ ಜಾರಿಗೊಳಿಸಲಾಗುವುದು.
