‘ಅಭಿವೃದ್ಧಿ, ಗ್ಯಾರಂಟಿ ಅನುಷ್ಠಾನಕ್ಕೆ ಒತ್ತು ನೀಡಿ’ ನೂತನ ಸಚಿವರಿಗೆ ಸುರ್ಜೆವಾಲಾ ಸಲಹೆ

ಬೆಂಗಳೂರು: ಕರ್ನಾಟಕ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ನೂತನ ಸಚಿವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅಭಿನಂದನೆ ಸಲ್ಲಿಸಿದ್ದಾರೆ. ಸಚಿವರ ಅಧಿಕಾರಾವಧಿ ಜನಪರ ಹಾಗೂ ಯಶಸ್ವಿಯಾಗಲಿ ಎಂದು ಅವರು ಹಾರೈಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಶುಭಾಶಯ ಕೋರಿರುವ ಸುರ್ಜೇವಾಲ, ಸಾಮಾಜಿಕ ನ್ಯಾಯಕ್ಕೆ ಕಾಂಗ್ರೆಸ್‌ನ ಬದ್ಧತೆಯನ್ನು ಪ್ರತಿಬಿಂಬಿಸುವ ಸಚಿವ ಸಂಪುಟ ರಚನೆಯಾಗಿದ್ದು, ಯುವಶಕ್ತಿ ಮತ್ತು ಅನುಭವದ ಸಮನ್ವಯಕ್ಕೆ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಆರಂಭಗೊಂಡಿರುವ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವುದು ಹಾಗೂ ಅಭಿವೃದ್ಧಿಯ ಕಾರ್ಯಸೂಚಿಯನ್ನು ಸಮರ್ಪಕವಾಗಿ ಜಾರಿಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬ ಸಚಿವರು ಮತ್ತು ಕಾರ್ಯಕರ್ತರ ಮೇಲಿದೆ ಎಂದು ತಿಳಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿವೃದ್ಧಿಯ ಪಯಣವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದು, ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದಾರೆ.
ಪ್ರತಿಯೊಬ್ಬ ಕನ್ನಡಿಗರ ಯಶಸ್ಸಿನಲ್ಲೇ ಕಾಂಗ್ರೆಸ್ ಸರ್ಕಾರದ ಯಶಸ್ಸಿದ್ದು, ಪ್ರತಿಯೊಬ್ಬರ ಕಲ್ಯಾಣವೇ ಸರ್ಕಾರದ ಧ್ಯೇಯ ಹಾಗೂ ಬದ್ಧತೆಯಾಗಿದೆ ಎಂದು ಸುರ್ಜೇವಾಲ ಹೇಳಿದ್ದಾರೆ.
