ಸುಭದ್ರ ರಾಷ್ಟ್ರಕ್ಕೆ ಒಂದು ರಾಷ್ಟ್ರ, ಒಂದು ಚುನಾವಣೆ ಬುನಾದಿ: ಕೆ.ಎಸ್. ನವೀನ್

ಗದಗ: ಭಾರತವನ್ನು ಆರ್ಥಿಕವಾಗಿ ಸುಭದ್ರಗೊಳಿಸಲು ಒಂದು ರಾಷ್ಟ್ರ, ಒಂದು ಚುನಾವಣೆ ಜಾರಿಯಾಗುವ ಅಗತ್ಯವಿದೆ ಎಂದು ಚಿತ್ರದುರ್ಗದ ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ಅವರು ಹೇಳಿದರು.
ನಗರದ ಕೆ.ಎಲ್.ಇ ಶಿಕ್ಷಣ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ನಡೆದ “ಒಂದು ರಾಷ್ಟ್ರ ಒಂದು ಚುನಾವಣೆ” ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಭಾರತ ಸ್ವತಂತ್ರಗೊಂಡ ನಂತರ 1952 ರಿಂದ 1967 ರ ವರೆಗೆ ಏಕಕಾಲಕ್ಕೆ ಚುನಾವಣೆಗಳು ನಡೆಯುತ್ತಿದ್ದವು. ನಂತರದಲ್ಲಿ ಇಂದಿರಾಗಾಂಧಿ ಅವರು 356 ನೇ ವಿಧಿಯ ವಿಶೇಷಾಧಿಕಾರ ಬಳಸಿ, ರಾಷ್ಟ್ರಪತಿಗಳ ಮೂಲಕ ರಾಜ್ಯ ಸರ್ಕಾರಗಳನ್ನು ಪತನಗೊಳಿಸುವ ಕೆಲಸ ಮಾಡಿದರು. ಅಂದಿನಿಂದ ಹಳಿತಪ್ಪಿದ ಚುನಾವಣಾ ವ್ಯವಸ್ಥೆ ಇನ್ನೂ ಸರಿಯಾಗುತ್ತಿಲ್ಲ. ಈಗ ಸರಿಮಾಡುವ ಉದ್ದೇಶದಿಂದ ಜಾರಿಯಾಗಬೇಕಿರುವುದು ಒಂದು ರಾಷ್ಟ್ರ ಒಂದು ಚುನಾವಣೆ ಕಾಯ್ದೆ ಎಂದು ತಿಳಿಸಿದರು.
ದೇಶವನ್ನು ಆರ್ಥಿಕವಾಗಿ ಸದೃಢಗೊಳಿಸಲು ಈ ಕಾಯ್ದೆ ಜಾರಿಯಾಗಬೇಕಿರುವುದು ಅಗತ್ಯ. ವರ್ಷಕ್ಕೆ ಒಂದಾದರೂ ಚುನಾವಣೆ ಮಾಡುವ ಅನಿವಾರ್ಯತೆ ನಮಗಿದೆ. ಏಕಕಾಲಕ್ಕೆ ಚುನಾವಣೆ ನಡೆದರೆ ಲಕ್ಷಾಂತರ ಕೋಟಿ ಹಣ ಉಳಿತಾಯವಾಗಲಿದೆ. ಇದರಿಂದ ಜನರ ತೆರಿಗೆ ಪೋಲಾಗುವುದನ್ನು ತಡೆಯಬಹುದು. ಏಕಕಾಲಕ್ಕೆ ಚುನಾವಣೆಗಳು ನಡೆದರೆ ಹೆಚ್ಚು ಜನರಿಗೆ ಅವಕಾಶ ಸಿಗುತ್ತದೆ. ಸ್ಥಿರ ಸರ್ಕಾರಗಳನ್ನು ಜನ ನಿರೀಕ್ಷಿಸುತ್ತಿದ್ದು, ಈ ಕಾಯ್ದೆಯಿಂದ ಅದು ಸಾಧ್ಯವಾಗಲಿದೆ. ಭ್ರಷ್ಟಾಚಾರ, ಮಾನವ ಸಂಪನ್ಮೂಲ ಪೋಲು, ರಾಷ್ಟ್ರೀಯ ಸಂಪನ್ಮೂಲದ ದುರ್ಬಳಕೆ ಈ ನಿಯಮದಿಂದ ತಡೆಯಲು ಸಾಧ್ಯವಿದೆ. ಯುವಕರು ಈ ಕಾಯ್ದೆಯ ಜೊತೆಗೆ ನಿಲ್ಲಬೇಕು, ಜನಾಭಿಪ್ರಾಯ ಮೂಡಿಸಲು ಸಹಕಾರಿಯಾಗಬೇಕು ಎಂದು ಒಂದು ರಾಷ್ಟ್ರ ಒಂದು ಚುನಾವಣೆ ಜಾರಿಯ ತುರ್ತನ್ನು ಮನವರಿಕೆ ಮಾಡಿಕೊಟ್ಟರು.
ಈ ವೇಳೆ ಒಂದು ರಾಷ್ಟ್ರ ಒಂದು ಚುನಾವಣೆಯ ಧಾರವಾಡ ವಿಭಾಗ ಸಂಯೋಜಕ ಕಿರಣಕುಮಾರ ವಿವೇಕವಂಶಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ಪ್ರಾಚಾರ್ಯರಾದ ಪಿ.ಜಿ. ಪಾಟೀಲ ಅಧ್ಯಕ್ಷೀಯ ನುಡಿಗಳನ್ನಾಡಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕೆ.ಬಿ.ಹಳಕುಂದ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಏಮ್.ಎಸ್. ಚಿನ್ನಪ್ಪಗೌಡ್ರ, ಐಕ್ಯುಎಸಿ ಸಂಯೋಜಕರಾದ ಡಾ. ರಮೇಶ್ ಜಿ.ಕೆ. ಉಪಸ್ಥಿತರಿದ್ದರು.
