ಮಂಡ್ಯದಲ್ಲಿ ಶಾಲಾ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಬಿಜೆಪಿ ಖಂಡನೆ
ಬೆಂಗಳೂರು: ಮಂಡ್ಯದಲ್ಲಿ 8 ವರ್ಷದ ಬಾಲಕಿಯನ್ನು ಬೆದರಿಸಿ ಸರ್ಕಾರಿ ಶಾಲಾ ಅವರಣದಲ್ಲೇ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಮಾಡಿರುವ ಕೃತ್ಯವನ್ನು ಪ್ರತಿಪಕ್ಷ ಬಿಜೆಪಿ ಖಂಡಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದಲೂ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದ್ದು ದಿನಕ್ಕೊಂದು ಮಾನಭಂಗ, ಅತ್ಯಾಚಾರ ಪ್ರಕರಣಗಳು ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸುತ್ತಲೇ ಇದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಮಂಡ್ಯದಲ್ಲಿ 8 ವರ್ಷದ ಬಾಲಕಿಯನ್ನು ಬೆದರಿಸಿ ಸರ್ಕಾರಿ ಶಾಲಾ ಅವರಣದಲ್ಲೇ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಮಾಡಿರುವ ಹೃದಯವಿದ್ರಾವಕ ಘಟನೆ ರಾಜ್ಯದಲ್ಲಿ ತಾಂಡವವಾಡುತ್ತಿರುವ ಅರಾಜಕತೆಗೆ ಮತ್ತೊಮ್ಮೆ ಕನ್ನಡಿ ಹಿಡಿದಿದೆ ಎಂಡಿದ್ದಾರೆ.
ಮಹಿಳೆಯರ ಮೇಲೆ ಅತ್ಯಾಚಾರವಾದರೆ ಬಿಜೆಪಿ ಕಾಲದಲ್ಲಿ ರೇಪ್ ಆಗಿಲ್ಲವಾ ಎಂದು ಸಿಎಂ ಸಿದ್ದರಾಮಯ್ಯ ಅವರು ಉಡಾಫೆ ಕೊಡುಕೊಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿರುವ ಅಶೋಕ್, ಈ ಸರ್ಕಾರದ ಈ ಸಂವೇದನಾರಹಿತ ಧೋರಣೆ, ಅಲಕ್ಷ್ಯವೇ ಇವತ್ತಿನ ಅರಾಜಕತೆಗೆ ಕಾರಣ ಎಂದು ಆರೋಪಿಸಿದ್ದಾರೆ.
8 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆ ಮೂವರು ಕಾಮುಕರನ್ನು ಪತ್ತೆ ಹಚ್ಚಿ, ಬಂಧಿಸಿ, ಕಾನೂನಿನ ವಶಕ್ಕೆ ಒಪ್ಪಿಸಿ. ಮಹಿಳೆಯರ ಸುರಕ್ಷತೆಯ ವಿಷಯವನ್ನ ಗಂಭೀರವಾಗಿ ಪರಿಗಣಿಸಿ ನಾಡಿನ ಹೆಣ್ಣುಮಕ್ಕಳಿಗೆ ನಿರ್ಭೀತಿಯಿಂದ ಓಡಾಡುವ ಗ್ಯಾರೆಂಟಿ ಕೊಡಿ ಎಂದು ಅವರು ಗೃಹಸಚಿವರನ್ನೂ ಒತ್ತಾಯಿಸಿದ್ದಾರೆ. .