‘ಟಾಕ್ಸಿಕ್’ ಟೀಸರ್ ವಿವಾದ: ಸೆನ್ಸಾರ್ ಮುನ್ನ ತೀರ್ಪು ಬೇಡ– ಜಯಮಾಲಾ

0
Actor Yash in Toxic Movie

ಬೆಂಗಳೂರು: ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆಯಾದ ಬಳಿಕ ಮಹಿಳಾ ಆಯೋಗ ಮತ್ತು ಸೆನ್ಸಾರ್ ಮಂಡಳಿಗೆ ದೂರುಗಳು ಸಲ್ಲಿಕೆಯಾಗಿರುವ ನಡುವೆಯೇ, ರಾಷ್ಟ್ರೀಯ ಕ್ರೈಸ್ತರ ಒಕ್ಕೂಟವೂ ಚಿತ್ರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದೆ. ಟೀಸರ್‌ನಲ್ಲಿ ದೇವದೂತ ಸಂತ ಮಿಕಯೇಲ್ ಅವರಿಗೆ ಅವಮಾನ ಮಾಡಲಾಗಿದೆ ಎಂದು ಒಕ್ಕೂಟ ಆರೋಪಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಕರ್ನಾಟಕ ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲಾ, ಟೀಸರ್ ಆಧರಿಸಿ ಸಂಪೂರ್ಣ ಸಿನಿಮಾವನ್ನು ನಿರ್ಧರಿಸುವುದು ಸರಿಯಲ್ಲ ಎಂದು ಹೇಳಿದರು.

“ಒಂದು ಟೀಸರ್ ನೋಡಿ ಇಡೀ ಸಿನಿಮಾ ಹೀಗೆಯೇ ಇರಲಿದೆ ಎಂದು ಮುಂಚಿತವಾಗಿ ತೀರ್ಮಾನಿಸುವುದು ತಪ್ಪು. ಪ್ರತಿಭಟನೆ ಮಾಡುವ ಮನಸ್ಸಿದ್ದರೆ ಮೊದಲು ಸಿನಿಮಾ ನೋಡಿ ನಂತರ ಅಭಿಪ್ರಾಯ ವ್ಯಕ್ತಪಡಿಸಲಿ. ಕನ್ನಡ ಚಿತ್ರರಂಗಕ್ಕೆ 93 ವರ್ಷಗಳ ಇತಿಹಾಸವಿದೆ. ಈ ಅವಧಿಯಲ್ಲಿ ಯಾವುದೇ ಧರ್ಮವನ್ನು ಅವಹೇಳನ ಮಾಡುವ ರೀತಿಯಲ್ಲಿ ಚಿತ್ರರಂಗ ನಡೆದುಕೊಂಡಿಲ್ಲ. ಸರ್ವಧರ್ಮ ಸಹಿಷ್ಣುತೆಯನ್ನೇ ಪಾಲಿಸಿಕೊಂಡು ಬಂದಿದೆ” ಎಂದು ಅವರು ಹೇಳಿದರು.

ಚಿತ್ರ ಇನ್ನೂ ಸೆನ್ಸಾರ್ ಆಗಿಲ್ಲ. ಸೆನ್ಸಾರ್ ಮಂಡಳಿ ಸಿನಿಮಾ ವೀಕ್ಷಿಸಿ ಅಗತ್ಯವಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತದೆ. ಆ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ವಿವಾದ ಸೃಷ್ಟಿಸುವುದು ಸೂಕ್ತವಲ್ಲ ಎಂದು ಜಯಮಾಲಾ ಅಭಿಪ್ರಾಯಪಟ್ಟರು.

“ಟೀಸರ್‌ನ ಉದ್ದೇಶ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಆಕರ್ಷಿಸುವುದು. ಒಂದು ದೃಶ್ಯ ಅಥವಾ ಫೋಟೊ ಆಧರಿಸಿ ಸಿನಿಮಾವನ್ನು ಸಂಪೂರ್ಣವಾಗಿ ತೀರ್ಮಾನಿಸಲು ಸಾಧ್ಯವಿಲ್ಲ. ಎಲ್ಲ ಸಂಘಟನೆಗಳಿಗೂ ತಾಳ್ಮೆಯಿಂದ ನಡೆದುಕೊಳ್ಳುವಂತೆ ಮನವಿ ಮಾಡುತ್ತೇನೆ” ಎಂದರು.

ಟೀಸರ್‌ನಲ್ಲಿ ಹಿಂಸೆ ಹಾಗೂ ಗ್ಲಾಮರಸ್ ದೃಶ್ಯಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಈಗಿನ ಬಹುತೇಕ ಸಿನಿಮಾಗಳಲ್ಲಿ ಹಿಂಸೆಯ ಅಂಶಗಳಿರುತ್ತವೆ. ಆದರೆ ಅದು ಕಥೆಯಲ್ಲಿ ಯಾವ ಕಾರಣಕ್ಕಾಗಿ ಬಳಸಲಾಗಿದೆ ಎಂಬುದು ಮುಖ್ಯ. ಕಥೆಯ ಪೂರ್ಣ ಹಿನ್ನೆಲೆ ತಿಳಿಯದೇ ಆರೋಪಿಸುವುದು ಸರಿಯಲ್ಲ” ಎಂದು ಹೇಳಿದರು.

ಚಿತ್ರ ನಿರ್ಮಾಪಕರೊಂದಿಗೆ ಮಾತುಕತೆ ನಡೆಸಿರುವುದಾಗಿ ತಿಳಿಸಿದ ಜಯಮಾಲಾ, “ಚಿತ್ರದಲ್ಲಿ ವಿವಾದಾತ್ಮಕ ಅಂಶಗಳಿಲ್ಲವೆಂದು ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ. ಅಶ್ಲೀಲತೆಯನ್ನೂ ಪ್ರದರ್ಶಿಸಿಲ್ಲ. ಯಾವುದೇ ಸಮಸ್ಯೆ ಇದ್ದರೆ ಸೆನ್ಸಾರ್ ಮಂಡಳಿ ಪರಿಶೀಲಿಸುತ್ತದೆ” ಎಂದರು.

Leave a Reply

Your email address will not be published. Required fields are marked *

You may have missed